ಮಡಿಕೇರಿ, ಡಿ. ೨೦ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ತಾ. ೨೧ ರಿಂದ ಪ್ರಾರಂಭ ಗೊಂಡು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಏಳು ದಿನಗಳ ಕಾಲ ನಡೆಯಲಿರುವ ವಿಶ್ವ ಜಾಂಬೂರಿ ಸಾಂಸ್ಕೃತಿಕ ಸಮ್ಮೇಳನಕ್ಕೆ ಕೊಡಗು ಜಿಲ್ಲೆಯಿಂದ ಹೊರೆಕಾಣಿಕೆಯಾಗಿ ೧೨೫೦ ಕೆ.ಜಿ.ಕಾಫಿ ಪುಡಿಯನ್ನು ನೀಡಲಾಗಿದೆ.

ದಾನಿಗಳು ನೀಡಿದ ಕಾಫಿ ಪುಡಿಯನ್ನು ಮೂಡುಬಿದಿರೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ ಎಂ.ಮೋಹನ್ ಆಳ್ವಾ ಅವರಿಗೆ ಜಿಲ್ಲಾ ಸ್ಕೌಟ್ಸ್ ಸಂಸ್ಥೆಯ ಆಯುಕ್ತ ಜಿಮ್ಮಿ ಸಿಕ್ವೇರಾ ಕೊಡಗಿನ ಪರವಾಗಿ ಹಸ್ತಾಂತರಿಸಿ ದ್ದಾರೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿಮ್ಯಾಥ್ಯೂ ಮಂಗಳವಾರ ತಿಳಿಸಿದರು.

ವಿಶ್ವ ಜಾಂಬೂರಿ ಸಮ್ಮೇಳನದಲ್ಲಿ ಭಾಗವಹಿಸಲಿರುವ ೫೦ ಸಾವಿರ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಶಿಕ್ಷಕರು ಮತ್ತು ಸಮ್ಮೇಳನದಲ್ಲಿ ಭಾಗವಹಿಸಲಿರುವ ನಾಗರಿಕರು ಕೊಡಗಿನ ತಾಜಾ ಕಾಫಿಯನ್ನು ಸವಿಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೊಡಗಿನ ಕೂಡ್ಲೂರು ಕೈಗಾರಿಕಾ ಕೇಂದ್ರದ ಎಸ್.ಎಲ್.ಎನ್. ಲೆವಿಸ್ಟಾ ಕಾಫಿ ಕಂಪನಿ ವತಿಯಿಂದ ೧೦೦೦ ಕೆ.ಜಿ. ಲೆವಿಸ್ಟಾ ಕಾಫಿ, ಗೈಡ್ಸ್ ಸಂಸ್ಥೆಯ ಪ್ರಮುಖರಾದ ಮೈಥಾಲಿ ಅವರ ಸಹಕಾರದಿಂದ ವೀರಾಜಪೇಟೆ ತಾಲೂಕಿನ ಅರಮೇರಿ ಕಳಂಚೇರಿ ಮಠದ ಎಸ್.ಎಂ.ಎಸ್.ವಿದ್ಯಾಸAಸ್ಥೆ ವತಿಯಿಂದ ೧೪೬ ಕೆ.ಜಿ. ಹಾಗೂ ಕೂಡ್ಲೂರು ಸುವರ್ಣ ಕಾಫಿ ಕಂಪನಿ ವತಿಯಿಂದ ೫೦ ಕೆ.ಜಿ. ಕಾಫಿ ಪುಡಿ ಯನ್ನು ವಿಶ್ವ ಜಾಂಬೂರಿ ಸಮ್ಮೇಳನಕ್ಕೆ ಕೊಡುಗೆಯಾಗಿ ನೀಡಲಾಗಿದೆ.