ಮಡಿಕೇರಿ, ಡಿ. ೨೧: ಮಡಿಕೇರಿ ನಗರವು ಕಾನೂನಿನ ಸರಪಳಿಯಲ್ಲಿ ಸಿಲುಕಿ ಹಲವು ವರ್ಷಗಳ ಕಾಲ ನಗರಸಭಾ ಆಡಳಿತ ಮಂಡಳಿಯೇ ರಚನೆಗೊಳ್ಳದೇ ನಿರ್ಲಕ್ಷö್ಯಕ್ಕೆ ಒಳಪಟ್ಟಿತು. ಬಳಿಕ ನೂತನ ಆಡಳಿತ ಮಂಡಳಿ ರಚನೆಗೊಂಡರೂ ಕೆಲಸ ಕಾರ್ಯಗಳು ಸಾಗುತ್ತಿಲ್ಲ ಎನ್ನುವ ನಾಗರಿಕರ ಆಕ್ಷೇಪಗಳು ಹೆಚ್ಚಾದವು. ಇದೀಗ ನಗರದ ಅಭಿವೃದ್ಧಿಗೆ ಪೂರಕ ವಾದ ಅನೇಕ ಕಾಮಗಾರಿಗಳಿಗೆ ಒಂದೆಡೆ ಸರಕಾರ, ಮತ್ತೊಂದೆಡೆ ನಗರಸಭೆ ಕಣ್ತೆರೆದು ಚಾಲನೆಗೆ ಸಿದ್ಧಗೊಂಡಿದೆ.

ಬಹುತೇಕ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳು ಮುಕ್ತಾಯಗೊಂಡಿದ್ದು, ಶೀಘ್ರದಲ್ಲಿ ಕೆಲಸ ಪ್ರಾರಂಭಗೊಳ್ಳಲಿರುವುದಾಗಿ ಮಡಿಕೇರಿ ನಗರಸಭೆಯ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ತಿಳಿಸಿದ್ದು, ‘ಶಕ್ತಿ’ಗೆ ದೊರೆತ ವಿವರ ಮಾಹಿತಿಯನ್ನು ಸಂಕ್ಷಿಪ್ತಗೊಳಿಸಿ ಈ ಕೆಳಗಿನಂತೆ ನೀಡ ಲಾಗಿದೆ.

ನಗರೋತ್ಥಾನ ಯೋಜನೆಯಲ್ಲಿ ರಾಜ್ಯಸರಕಾರವು ಇದೀಗ ರೂ. ೪೦ ಕೋಟಿ ಬಿಡುಗಡೆಮಾಡಿದೆ. ಈ ಪೈಕಿ ಈಗಾಗಲೇ ರೂ. ೧೩.೦೭ ಕೋಟಿ ಹಣಕ್ಕೆ ಟೆಂಡರ್ ಆಗಿದೆ. ನಗರೋತ್ಥಾನ ಹಣದಲ್ಲಿ ರೂ. ೧೦ ಕೋಟಿಯನ್ನು ಕಾವೇರಿ ಕಲಾಕ್ಷೇತ್ರದ ಸಂಪೂರ್ಣ ಜೀರ್ಣೋದ್ಧಾರ ಕಾರ್ಯಕ್ಕಾಗಿ ಬಳಸಲಾಗುತ್ತದೆ. ನಗರೋತ್ಥಾನ ನಿಧಿ ಪೈಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾರ್ಯಕ್ರಮಗಳಿಗೆ ರೂ. ೮೧೯.೪೦ ಲಕ್ಷ ಇತರ ಬಡಜನರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ರೂ. ೨೪೬.೫೦ ಲಕ್ಷ, ವಿಕಲಚೇತನರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ರೂ. ೧೭೦ ಲಕ್ಷ, ಕುಡಿಯುವ ನೀರಿನ ಕಾರ್ಯಕ್ರಮಗಳಿಗಾಗಿ ರೂ. ೨೩೪.೧೦ ಲಕ್ಷ, ಮಳೆನೀರು ಚರಂಡಿ ಕಾಮಗಾರಿಗಳಿಗೆ ರೂ. ೨೨೦ ಲಕ್ಷ, ಬೀದಿದೀಪ ಕಾಮಗಾರಿಗಳಿಗೆ ರೂ. ೧೫೦ ಲಕ್ಷ, ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ರೂ. ೬೧೦ ಲಕ್ಷ, ಕಟ್ಟಡ ಕಾಮಗಾರಿಗಳಿಗೆ ರೂ. ೯೫೦ ಲಕ್ಷವನ್ನು ಮೀಸಲಿರಿಸಲಾಗಿದೆ ಎಂದು ಅನಿತಾ ಪೂವಯ್ಯ ಮಾಹಿತಿಯಿತ್ತರು.

(ಮೊದಲ ಪುಟದಿಂದ)

೧೫ನೇ ಫೈನಾನ್ಸ್ ಕಾಮಗಾರಿ

೧೫ನೇ ಪೈನಾನ್ಸ್ನಲ್ಲಿ ರೂ. ೧೪೮ ಲಕ್ಷ ಹಣವನ್ನು ವಿನಿಯೋಗಿಸಲಾಗುವುದು ಈಗಾಗಲೇ ಇದಕ್ಕೆ ಟೆಂಡರ್ ಪ್ರಕ್ರಿಯೆಗಳು ಮುಕ್ತಾಯಗೊಂಡಿವೆ. ಇದರಲ್ಲಿ ಮುಖ್ಯವಾಗಿ ಕೊಳವೆ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ, ಪಂಪ್‌ಹೌಸ್‌ಗಳಿಗೆ ಮೋಟಾರ್ ಅಳವಡಿಕೆ, ವಿದ್ಯುತ್ ಸಂಪರ್ಕ ಕಲ್ಪಿಸುವುದು, ಸಬ್‌ಮರ್ಸಿಬಲ್ ಮೋಟಾರ್‌ಗಳ ಅಳವಡಿಕೆ, ಕೊಳವೆ ಬಾವಿಗಳ ನಿರ್ಮಾಣ, ಕೂಟುಹೊಳೆ ಪಂಪ್‌ಹೌಸ್‌ಗೆ ಪ್ರತ್ಯೇಕ ವಿದ್ಯುತ್ ಸಂಪರ್ಕ, ಕ್ಲೋರಿನೇಷನ್ ಯುನಿಟ್ ಅಳವಡಿಕೆ, ಘನತ್ಯಾಜ್ಯ ನಿರ್ವಹಣೆ ಸಂದರ್ಭ ಸಕ್ಕಿಂಗ್ ಮತ್ತು ಜೆಟ್ಟಿಯಂತ್ರ ಅಳವಡಿಕೆ ಈ ಎಲ್ಲಾ ಕೆಲಸಗಳಿಗಾಗಿ ರೂ. ೮೮.೮೦ ಲಕ್ಷಕ್ಕೆ ಟೆಂಡರ್ ಕರೆಯಲಾಗಿದೆ. ಇನ್ನುಳಿದಂತೆ ೫೯.೨೦ ಲಕ್ಷ ಮೊತ್ತಕ್ಕೆ ಒಳಚರಂಡಿ ವ್ಯವಸ್ಥೆ ಕಾಮಗಾರಿಗಳು, ಮಳೆ ನೀರು ಚರಂಡಿ, ನೈರ್ಮಲ್ಯ ಮತ್ತು ಸ್ಟೇಜ್‌ಗಳ ನಿವÀðಹಣೆ, ರಸ್ತೆ ಸೇತುವೆ ಮತ್ತು ಪಾದಚಾರಿ ಮಾರ್ಗಗಳ ರಚನೆ, ಬೀದಿದೀಪ ಹಾಗೂ ವಿದ್ಯುತ್ ಉಳಿತಾಯ ಕ್ರಮಗಳಿಗಾಗಿ ಕಾಮಗಾರಿ, ಸ್ಮಶಾನ ಅಭಿವೃದ್ಧಿ ಕಾಮಗಾರಿ, ಕೆಲವೆಡೆ ಶೌಚಾಲಯಗಳು, ಸಾರ್ವಜನಿಕ ಬಸ್ ನಿಲ್ದಾಣ ಕಾಮಗಾರಿ, ಕೊಳಗೇರಿ ಸುಧಾರಣೆ ಮತ್ತು ನವೀಕರಣ, ಕೆಲವೆಡೆ ಕಲ್ವರ್ಟ್ ನಿರ್ಮಾಣ ಮುಂತಾದ ಕಾಮಗಾರಿಗಳಿಗಾಗಿ ಈ ಹಣವನ್ನು ಬಳಸಲಾಗುತ್ತದೆ. ಎಲ್‌ಇಡಿ ಬೀದಿ ದೀಪಗಳನ್ನು ೨೩ ವಾರ್ಡ್ಗಳಲ್ಲಿ ರೂ. ೧೧.೮೪ ಲಕ್ಷದಲ್ಲಿ ಅಳವಡಿಸಲಾಗುತ್ತದೆ.

ನಗರಸಭಾ ನಿಧಿ ಕಾಮಗಾರಿ

ನಗರಸಭಾ ನಿಧಿಯಡಿ ನಗರಸಭಾ ವ್ಯಾಪ್ತಿಯಲ್ಲಿ ಬರುವ ೨೩ ವಾರ್ಡ್ಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಈ ನಿಧಿಯಿಂದ ವಿವಿಧ ಕಾಮಗಾರಿಗಳಿಗಾಗಿ ರೂ.೧೧೧.೭೨ ಲಕ್ಷವನ್ನು ವಿನಿಯೋಗಿಸಲಾಗುವುದು. ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ವಾರ್ಡ್ಗಳ ಸದಸ್ಯರುಗಳು ಸೂಚಿಸಿರುವಂತೆ ೨೩ ವಾರ್ಡ್ಗಳಲ್ಲಿ ಅಗತ್ಯವಾದ ಕಾಮಗಾರಿಗಳಿಗೆ ಈ ಹಣವನ್ನು ಬಳಸಲಾಗುತ್ತದೆ. ಎಲ್ಲಾ ಕಾಮಗಾರಿಗಳು ತಲಾ ವಾರ್ಡ್ಗೆ ಸುಮಾರು ರೂ. ೫ ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ವಹಿಸಲ್ಪಡಲಿದೆ ಎಂದು ಅಧ್ಯಕ್ಷೆ ಅನಿತಾ ಪೂವಯ್ಯ ಮಾಹಿತಿಯಿತ್ತರು.

ನಗರದ ೫ ಸ್ಥಳಗಳಲ್ಲಿ ಕಸವಿಲೇವಾರಿ

ಪ್ರಸಕ್ತ ವಾಹನಗಳಲ್ಲಿ ಆಯಾ ಬಡಾವಣೆಯ ಮನೆಗಳ ಬಳಿ ತೆರಳಿ ಕಸವನ್ನು ಹೊತ್ತೊಯ್ಯುತ್ತಿರುವ ಕೆಲಸ ನಿರಂತರವಾಗಿ ಸಾಗಿವೆ. ಈ ನಡುವೆ ಕೆಲವೊಂದು ಪ್ರಮುಖ ಸ್ಥಳಗಳಲ್ಲಿ ವಿಶೇಷ ರೀತಿಯ ಕಸದ ಪೆಟ್ಟಿಗೆಗಳನ್ನು ಇರಿಸಲು ನಿರ್ಧರಿಸಲಾಗಿದೆ. ಉತ್ತಮ ಗುಣಮಟ್ಟದ ಜಿಐ ಸಾಮಗ್ರಿಗಳನ್ನು ಬಳಸಿ ಒಣತ್ಯಾಜ್ಯ ಹಾಗೂ ೩ ತ್ಯಾಜ್ಯಗಳನ್ನು ಸಂಗ್ರಹಿಸಲು ಆಯ್ದ ಕೆಲವು ಜಾಗಗಳಲ್ಲಿ ಕಬ್ಬಿಣದ ಜಾಲರಿ ಪೆಟ್ಟಿಗೆಗಳನ್ನು ಸಿದ್ಧಪಡಿಸಿ ಅಳವಡಿಸಲಾಗುತ್ತದೆ. ೫ ಅಡಿ ಎತ್ತರ ೫ ಅಡಿ ಅಗಲದ ೫ ಒಣತ್ಯಾಜ್ಯ ಪೆಟ್ಟಿಗೆಗಳನ್ನು ಹಾಗೂ ೨ ಇ-ತ್ಯಾಜ್ಯ ಪೆಟ್ಟಿಗೆಗಳನ್ನು ಇರಿಸಲಾಗುತ್ತದೆ. ನಗರದ ರಾಜಾಸೀಟ್, ಹಳೆ ಖಾಸಗಿ ಬಸ್‌ನಿಲ್ದಾಣ, ಹೊಸ ಖಾಸಗಿ ಬಸ್ ನಿಲ್ದಾಣಗಳಲ್ಲಿ ಒಣತ್ಯಾಜ್ಯ ಪೆಟ್ಟಿಗೆಗಳನ್ನು ಇರಿಸಲಾಗುತ್ತದೆ.

ಇ-ತ್ಯಾಜ್ಯ ಪಟ್ಟಿಗೆಗಳನ್ನು ಮಾರುಕಟ್ಟೆ ಮತ್ತು ಹಳೇ ಖಾಸಗಿ ಬಸ್ ನಿಲ್ದಾಣಗಳಲ್ಲಿ ಇರಿಸಲಾಗುತ್ತದೆ. ಇ-ತ್ಯಾಜ್ಯ ಪೆಟ್ಟಿಗೆಯಲ್ಲಿ ಹಳೆಯ ಎಲೆಕ್ಟಾçನಿಕ್ ವಸ್ತುಗಳನ್ನು ಹಾಕಲು ನಾಗರಿಕರು ಬಳಸಬೇಕಾಗಿದೆ. ಇದೇ ರೀತಿ ನಗರದ ೨ ಪ್ರದೇಶಗಳಲ್ಲಿ ಪೆಟ್‌ಬಾಟಲ್ ಶ್ರೆಡ್ಡರ್‌ಗಳನ್ನು ಇರಿಸಲಾಗುತ್ತದೆ. ಒಂದನ್ನು ರಾಜಾಸೀಟ್ ಹಾಗೂ ಮತ್ತೊಂದನ್ನು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಇರಿಸಲಾಗುತ್ತದೆ. ಇದರಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಕಿದ ಕೂಡಲೇ ವಿದ್ಯುತ್ ಚಾಲನೆ ಮೂಲಕ ಅದು ಪುಡಿಪುಡಿಯಾಗುತ್ತದೆ. ಈ ಪುಡಿಯಾದ ತ್ಯಾಜ್ಯಗಳನ್ನು ರೀಸೈಕ್ ಲಿಂಗ್ ಅವರು ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ.

ನಗರಸಭಾಧ್ಯಕ್ಷರು ‘ಶಕ್ತಿ’ಗೆ ಮಾಹಿತಿ ನೀಡುವ ಸಂದರ್ಭ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಬಿ. ಸುಬ್ರಮಣಿ ಉಮೇಶ್, ನಗರಸಭಾ ಸದಸ್ಯರುಗಳಾದ ಮಹೇಶ್ ಜೈನಿ ಮತ್ತು ಅರುಣ್ ಶೆಟ್ಟಿ ಉಪಸ್ಥಿತರಿದ್ದರು.