ಕೊಡ್ಲಿಪೇಟೆ, ಡಿ. ೨೧: ಪದವಿಪೂರ್ವ ಕಾಲೇಜು ವಿಭಾಗದ ಶಾಟ್‌ಪುಟ್ ಮತ್ತು ಜಾವಲಿನ್ ಥ್ರೋ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆಯ ನಿರ್ದೇಶಕ ಯು.ವಿ. ಶಿವಪ್ರಸಾದ್ ಅವರು ವೈಯಕ್ತಿಕವಾಗಿ ತಲಾ ಐದು ಸಾವಿರ ಧನ ಸಹಾಯ ನೀಡಿ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು.

ಶಾಟ್‌ಪುಟ್ ಕ್ರೀಡೆಯಲ್ಲಿ ಕೆ.ಟಿ. ಸತ್ಯ ಮತ್ತು ಜಾವಲಿನ್ ಥ್ರೋನಲ್ಲಿ ಅಜಿತ್ ಅವರುಗಳು ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಕಾಲೇಜು ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಿವಪ್ರಸಾದ್ ಅವರು ಈರ್ವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಉತ್ತೇಜಿಸಿದರು. ಸಂಸ್ಥೆಯ ದೈಹಿಕ ಶಿಕ್ಷಕ ರಂಗಸ್ವಾಮಿ ಅವರು ಈ ವಿದ್ಯಾರ್ಥಿಗಳಿಗೆ ಮುಖ್ಯ ತರಬೇತುದಾರರಾಗಿದ್ದಾರೆ.