ಮಡಿಕೇರಿ, ಡಿ. ೨೦: ಸರಕಾರವು ರೈತರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ರೈತರು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಯಮುನಾ ಚಂಗಪ್ಪ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.
ಸಂಸದರು, ಶಾಸಕರುಗಳ ಪ್ರಯತ್ನದಿಂದ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳ ಸಮರ್ಪಕ ವರದಿ ಅನ್ವಯ ರಾಜ್ಯ ಸರಕಾರ ರೂ. ೧೧೩ ಕೋಟಿ ಬೆಳೆ ನಷ್ಟ ಪರಿಹಾರ ಹಣವನ್ನು ಬಿಡುಗಡೆ ಮಾಡಿದ್ದು, ಒಂದು ಹೆಕ್ಟೇರ್ಗೆ ೨೮ ಸಾವಿರ ರೂ.ಗಳಂತೆ ರೈತರ ಖಾತೆಗಳಿಗೆ ಪರಿಹಾರ ಹಣ ಜಮೆ ಆಗುತ್ತಿದೆ. ಸುಮಾರು ೪೦ ಸಾವಿರಕ್ಕೂ ಅಧಿಕ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ದೊರಕಲಿದೆ. ಸಂಪಾಜೆ ವ್ಯಾಪ್ತಿಯಲ್ಲಿ ಅಡಿಕೆ ಬೆಳೆ ರೋಗಕ್ಕೆ ತುತ್ತಾಗಿದ್ದು, ರಬ್ಬರ್ ಕೂಡ ವಿಪರೀತ ಮಳೆಯಿಂದ ಹಾಳಾಗಿರುವ ಹಿನ್ನೆಲೆಯಲ್ಲಿ ತೆಂಗು, ಬಾಳೆ, ಕರಿಮೆಣಸಿನಂತಹ ಬದಲಿ ಕೃಷಿ ಮಾಡಲು ಹೆಕ್ಟೇರ್ಗೆ ೨೩ ಸಾವಿರ ರೂ. ಸಹಾಯಧನವನ್ನು ಸರಕಾರ ನೀಡುತ್ತಿದೆ. ಈ ಎಲ್ಲದರ ಬಗ್ಗೆ ಮಾಹಿತಿ ಪಡೆದುಕೊಂಡು ರೈತರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಅವರುಗಳು ಕೋರಿದರು.
ಗೋಷ್ಠಿಯಲ್ಲಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕುಂದಳ್ಳಿ, ಮತ್ರಂಡ ಕಬೀರ್ ದಾಸ್ ಉಪಸ್ಥಿತರಿದ್ದರು.