ವೀರಾಜಪೇಟೆ, ಡಿ. ೨೦: ನಿವೇಶನಕ್ಕಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಸಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಭಾರತ ಕಮ್ಯುನಿಷ್ಟ್ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿ ಎದುರು ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ'' ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಸಿ.ಪಿ.ಐ.ಎಂ ಕಾರ್ಯದರ್ಶಿ ಎ.ಮಹದೇವ್ ಮಾತನಾಡಿ ಅಮ್ಮತ್ತಿ ಕಾರ್ಮಾಡು ವ್ಯಾಪ್ತಿಯಲ್ಲಿ ಅನೇಕ ದಲಿತರು ಮತ್ತು ಆದಿವಾಸಿಗಳು ಸ್ವಂತ ಮನೆ ಸೂರು ಇಲ್ಲದೆ ಜೀವನ ನಡೆಸುತ್ತಿದ್ದಾರೆ. ೨೦೧೦ ರಿಂದಲೂ ನಿವೇಶನಕ್ಕಾಗಿ ಸ್ಥಳೀಯ ಪಂಚಾಯಿತಿಗೆ ಅರ್ಜಿ ಸಲ್ಲಿಸುತ್ತಿದ್ದರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾರು ಗಮನ ಹರಿಸದಿರುವುದರಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಮೇಲಾಧಿಕಾರಿಗಳು ಬಂದು ಪ್ರತಿಭಟನೆ ಸ್ಥಳದಲ್ಲಿಯೇ ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದರು.

ನಂತರ ವೀರಾಜಪೇಟೆ ತಹಶೀಲ್ದಾರ್ ಅರ್ಚನಾ ಭಟ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು.

ಬಳಿಕ ಪ್ರತಿಭಟನೆಯಲ್ಲಿದ್ದ ಮುಖಂಡರೊAದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ. ನಾಣಯ್ಯ, ಅಭಿವೃದ್ಧಿ ಅಧಿಕಾರಿ ಎ.ಟಿ.ಮಾನಸ, ಸದಸ್ಯ ಅಭಿಜೀತ್, ಕಂದಾಯ ಪರಿವೀಕ್ಷಕ ಬಿ.ಆರ್.ಅನೀಲ್ ಕುಮಾರ್, ಗ್ರಾಮಲೆಕ್ಕಿಗರಾದ ದೇವಯ್ಯ ಅವರುಗಳೊಂದಿಗೆ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸಿ ನಿರಾಶ್ರಿತರು, ಬಡ ಕಾರ್ಮಿಕರು ಮತ್ತು ಆದಿವಾಸಿಗಳು ಮನೆ ಇಲ್ಲದವರನ್ನು ಗುರುತಿಸಿ ಪಟ್ಟಿ ಮಾಡಿ ಗ್ರಾಮ ಸಭೆಯಲ್ಲಿ ಚರ್ಚಿಸಿ ಮಾಹಿತಿ ನೀಡುವಂತೆ ಗ್ರಾ.ಪಂ. ಪಿಡಿಓಗೆ ಸೂಚಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ತಹಶೀಲ್ದಾರ್ ಅರ್ಚನಾ ಭಟ್ ತಿಳಿಸಿದಾಗ ಪ್ರತಿಭಟನೆ ಕೈಬಿಡಲಾಯಿತು.

ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಇಬ್ರಾಹಿಂ, ಹೆಚ್.ಪಿ.ರಮೇಶ್, ಹೋರಾಟ ಸಮಿತಿ ಅಧ್ಯಕ್ಷ ಪಾಪಣ್ಣ, ಉಪಾಧ್ಯಕ್ಷ ಮನೋಜ್, ಸದಸ್ಯರಾದ ಯಶೋಧ, ಪುಷ್ಪ, ಕುಮಾರ, ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಭಟನೆ ಸಂದರ್ಭ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಡಿವೈಎಸ್‌ಪಿ ನಿರಂಜನ್ ರಾಜೆ ಅರಸ್, ಗೋಣಿಕೊಪ್ಪ ವೃತ್ತನಿರೀಕ್ಷಕ ಗೋವಿಂದರಾಜು, ವೀರಾಜಪೇಟೆ ನಗರ ಠಾಣಾಧಿಕಾರಿ ಶ್ರೀಧರ್ ಭಾಗವಹಿಸಿದ್ದರು.