ಅಮ್ಮತ್ತಿ, ಡಿ. ೨೦: ಇತ್ತಿಚೀನ ದಿನಗಳಲ್ಲಿ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಯಾಗಿದ್ದು ಎಲ್ಲರೂ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಕೈ ಜೋಡಿಸಬೇಕೆಂದು ಕಾರ್ಮಾಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುಕ್ಕಾಟಿರ ಸಂತೋಷ ಕರೆ ನೀಡಿದರು.
ತ್ರಿ ವೀಲರ್ಸ್ ಕ್ರಿಕೆಟರ್ಸ್ ಅಮ್ಮತ್ತಿ ವತಿಯಿಂದ ಅಮ್ಮತ್ತಿ ಪ್ರೌಢ ಶಾಲಾ ಮೈದಾನದಲ್ಲಿ ನೆಲ್ಲಮಕ್ಕಡ ಸಜಿ ನಾಣಯ್ಯ ಜ್ಞಾಪಕಾರ್ಥವಾಗಿ ಜಿಲ್ಲೆಯ ಆಟೋ ಚಾಲಕರಿಗೆ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಯುವಕರು ದೇಶದ ಸಂಪತ್ತು. ಆದರೆ ಅವರು, ಹೆಚ್ಚಾಗಿ ಡ್ರಗ್ಸ್ನಂತಹ ಚಟಕ್ಕೆ ಬಲಿಯಾಗುತಿರುವುದು ವಿಷಾದನೀಯ. ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರು ಈ ಕಾರ್ಯಕ್ಕೆ ಶ್ರಮಿಸಬೇಕೆಂದರು.
ರಾಷ್ಟೀಯ ಸ್ವಯಂ ಸೇವಕ ಸಂಘದ ಪ್ರಮುಖ ಗುರುರಾಜ್ ಸ್ವಾಮಿ ಮಾತನಾಡಿ, ಕ್ರೀಡೆಗಳಿಂದ ಸಮಾಜದಲ್ಲಿ ಒಗ್ಗಟ್ಟು ಮೂಡುವುದಲ್ಲದೆ ದೈಹಿಕ ಸಾಮರ್ಥ್ಯವೂ ಹೆಚ್ಚಾಗುತ್ತದೆ ಎಂದರು.
ಮೂರು ದಿನಗಳ ಕಾಲ ನಡೆದ ಪಂದ್ಯಾಟದಲ್ಲಿ ಶ್ರೀಮಂಗಲದ ಶ್ರೀ ರಾಮ್ ಆಟೋ ಚಾಲಕ ಸಂಘ ಪ್ರಥಮ ಬಹುಮಾನವನ್ನು ಪಡೆದರೆ, ಪಾಲಿಬೆಟ್ಟದ ಆಟೋ ಸರ್ಕಲ್ ತಂಡ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಆಟೋ ಚಾಲಕರು ಈ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದರು. ಅಮ್ಮತ್ತಿ ಪೊಲೀಸ್ ಠಾಣಾ ಸಹಾಯಕ ಠಾಣಾಧಿಕಾರಿ ಗಣಪತಿ, ಬೆಳೆಗಾರ ಕುಟ್ಟಂಡ ಪ್ರಿನ್ಸ್ ಗಣಪತಿ ಹಾಗೂ ಕ್ಲಬ್ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಶಿವರಾಜ್, ಕಾರ್ಯದರ್ಶಿ ಮನು ಸೇರಿದಂತೆ ಸಾರ್ವಜನಿಕರು ಇದ್ದರು.