ಮಡಿಕೇರಿ, ಡಿ. ೨೦: ಗ್ರಾಮ ಪಂಚಾಯಿತಿ ನೌಕರರ ಕನಿಷ್ಟ ವೇತನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫೆಬ್ರವರಿ ಮೊದಲ ವಾರದಲ್ಲಿ ವಿಧಾನಸಭಾ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಆರ್. ಭರತ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಗ್ರಾ.ಪಂ.ಗಳಲ್ಲಿ ದುಡಿಯುತ್ತಿರುವ ೬೫ ಸಾವಿರ ನೌಕರರ ಕನಿಷ್ಟ ಬದುಕು ನಡೆಸಲು ಬೇಕಾಗಿರುವ ಕನಿಷ್ಟ ವೇತನ ನೀಡದೇ, ಮೂಲಭೂತ ಸೌಲಭ್ಯವನ್ನು ನೀಡದೇ ಗ್ರಾ.ಪಂ. ನೌಕರರ ಸಂಕಷ್ಟವನ್ನು ಚರ್ಚೆ ಮಾಡಲು ಅವಕಾಶಗಳೇ ಇಲ್ಲದ ರೀತಿಯಲ್ಲಿ ರಾಜ್ಯ ಸರ್ಕಾರ ಮತ್ತು ಪಂಚಾಯತ್ ರಾಜ್ ಸಚಿವಾಲಯಗಳ ಅಧಿಕಾರಿಗಳು ನಿರ್ಲಕ್ಷö್ಯ ಮಾಡುತ್ತಿದ್ದು, ದುಡಿಯುತ್ತಿರುವವರ ಬಗ್ಗೆ ಕಾನೂನುಗಳನ್ನು ತರಬೇಕಾದ, ಕಾರ್ಮಿಕ ಸಮಸ್ಯೆಗಳಿಗ ಪರಿಹಾರ ಕಾಣಬೇಕಾದ ಜನಪ್ರತಿನಿಧಿಗಳು ತಮ್ಮ ವೇತನ ಹೆಚ್ಚಿಸುವಲ್ಲಿ ವಿಧಾನಸೌಧದಲ್ಲಿ ಚರ್ಚೆ ನಡೆಸುತ್ತಿರುವುದು ಈ ನಾಡಿನ ದುರಂತ ಎಂದರು.
ಪ್ರಸ್ತತ ಹಣದ ದುಬ್ಬರ ಶೇ. ೭.೮ ರಷ್ಟಾಗಿದ್ದು, ಬೆಲೆಗಳೆಲ್ಲಾ ಹೆಚ್ಚಾಗಿ ಜೀವನ ನಡೆಸುವುದು ದುಸ್ತಾರವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ವೆಚ್ಚ, ವೈದ್ಯಕೀಯ ಅಗತ್ಯ, ಹಬ್ಬ, ಆಚರಣೆಗಳು, ಕನಿಷ್ಟ ಮನೋರಂಜನೆ ಮತ್ತು ವೃದ್ಧಾಪ್ಯ, ಮದವೆ, ಗ್ರಾಹಕರ ಬೆಲೆ, ಸೇವಾ ಅವಧಿಗೆ ಮಾನ್ಯತೆ ಸೇರಿದಂತೆ ಇನ್ನಿತರ ಕಾನೂನಾತ್ಮಕ ಅಂಶಗಳನ್ನು ಪರಿಗಣಿಸಿ ಗ್ರಾ.ಪಂ ನೌಕರರಾದ ಕರ ವಸೂಲಿ, ಗುಮಾಸ್ತ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ಗಳಿಗೆ ರೂ. ೩೮,೦೬೨.೫೦, ಅಟೆಂಡರ್ ರೂ. ೨೮,೭೫೦, ಸ್ವಚ್ಛತಾಗಾರರಿಗೆ ರೂ. ೨೫,೦೦೦ ನೀಡಬೇಕೆಂದು ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯದರ್ಶಿ ಗಳಿಗೆ ಹಾಗೂ ಸಚಿವರನ್ನು ಬೇಡಿ ಮಾಡಿ ಮನವಿ ಸಲ್ಲಿಸಿದರು, ಇಲ್ಲಿಯವರೆಗೆ ಗ್ರಾ.ಪಂ. ನೌಕರರಿಗೆ ಕನಿಷ್ಟ ವೇತನ ನೀಡಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಎಲ್ಲಾ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸ ಬೇಕು, ಪಿಂಚಣಿ ಸೌಲಭ್ಯ ನೀಡಬೇಕು, ಜಿಲ್ಲೆಯಲ್ಲಿ ೧೮೫ಕ್ಕಿಂತಲೂ ಹೆಚ್ಚು ಹುದ್ದೆ ಖಾಲಿ ಇದ್ದು, ಕೂಡಲೇ ಭರ್ತಿ ಮಾಡಬೇಕು, ಕಾರ್ಮಿಕರನ್ನು ಹೆಚ್ಚು ಹೊರೆಯಿಂದ ತಪ್ಪಿಸಬೇಕು, ಪಿಡಿಓ ಹಾಗೂ ಡಾಡಾ ಎಂಟ್ರಿ ಆಪರೇಟರ್ಗಳನ್ನು ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಭಡ್ತಿ ನೀಡಬೇಕು, ನೇಮಕಗೊಂಡ ಎಲ್ಲಾ ನೌಕರರನ್ನು ಏಕಕಾಲದಲ್ಲಿ ಜಿ.ಪಂ. ಅನುಮೋದನೆ ಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ ವಿಧಾನಸಭಾ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮಡಿಕೇರಿ ಪದಾಧಿಕಾರಿ ಬಿ.ಕೆ. ಜತ್ತಪ್ಪ, ಕುಶಾಲನಗರ ಪದಾಧಿಕಾರಿಗಳಾದ ಎಂ.ಎ. ಹಮೀರ್, ಹೆಚ್.ಎಂ. ದಿನೇಶ್, ಸೋಮವಾರಪೇಟೆ ತಾಲೂಕು ಪದಾಧಿಕಾರಿ ಹೆಚ್.ಆರ್. ಕಂದಸ್ವಾಮಿ ಉಪಸ್ಥಿತರಿದ್ದರು.