ಸೋಮವಾರಪೇಟೆ, ಡಿ. ೨೦: ಪಟ್ಟಣದ ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ತಾ. ೨೭ ರಂದು ಮಂಡಲ ಪೂಜೋತ್ಸವ ನಡೆಯಲಿದೆ. ಮಂಡಲ ಪೂಜೆಯ ಅಂಗವಾಗಿ ದೇವಾಲಯ ದಲ್ಲಿ ತಾ.೨೩ರಿಂದ ಐದು ದಿನಗಳ ಕಾಲ ವಿಶೇಷ ಪೂಜೆಗಳು ಜರುಗಲಿವೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ಕುಮಾರ್ ತಿಳಿಸಿದ್ದಾರೆ.
ತಾ.೨೩ ರಿಂದ ೨೭ರವರೆಗೆ ಬೆಳಿಗ್ಗೆ ೭ ಗಂಟೆಗೆ ಮಹಾಗಣಪತಿ ಹೋಮ ನಡೆಯಲಿದೆ. ತಾ.೨೭ರಂದು ಬೆಳಿಗ್ಗೆ ೫.೩೦ಕ್ಕೆ ದೇವಾಲಯದ ನಡೆ ಬಾಗಿಲು ತೆರೆಯುವುದು, ಸುಪ್ರಭಾತ ಸೇವೆ, ದೀಪಾರಾಧನೆ, ಮಹಾಗಣಪತಿ ಹೋಮ, ನಿರ್ಮಾಲ್ಯ ದರ್ಶನ, ಉಷಾಃ ಪೂಜೆ, ಬೆಳಗ್ಗೆ ೯ ಗಂಟೆಗೆ ಧರ್ಮಶಾಸ್ತ ಅಯ್ಯಪ್ಪ ದೇವರಿಗೆ ತುಪ್ಪದ ಅಭಿಷೇಕ ನಡೆಯಲಿದೆ. ನಂತರ ಉಚ್ಛ ಪೂಜೆ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ.
ಸಂಜೆ ೫.೩೦ಕ್ಕೆ ನಡೆ ಬಾಗಿಲು ತೆರೆಯುವುದು, ದೀಪಾರಾಧನೆ, ಅಯ್ಯಪ್ಪ ವೃತಧಾರಿಗಳ ಭಜನೆ ಯೊಂದಿಗೆ ಪಡಿಪೂಜೆ, ಹತ್ತಾಯ ಪೂಜೆ, ಪುಷ್ಪಾಭಿಷೇಕ, ಮಹಾ ಮಂಗಳಾರತಿ, ಹರಿವರಾಸನಂ ನಂತರ ಪ್ರಸಾದ ವಿನಿಯೋಗ ಮತ್ತು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ವರ್ಷಕ್ಕೊಂದು ಬಾರಿ ಮಂಡಲ ಪೂಜೋತ್ಸವದಲ್ಲಿ ಜರುಗುವ ತುಪ್ಪದ ಅಭಿಷೇಕದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳು ತಾ.೨೩ರಿಂದ ಐದು ದಿನಗಳು ತಮ್ಮ ಮನೆಯ ಪೂಜಾ ಕೊಠಡಿಯಲ್ಲಿ ತುಪ್ಪವನ್ನಿಟ್ಟು, ಶುದ್ಧ ಆಚರಣೆಯೊಂದಿಗೆ ಪೂಜೆ ಸಲ್ಲಿಸಿ, ತಾ. ೨೭ ರಂದು ಬೆಳಿಗ್ಗೆ ೮ ಗಂಟೆಗೆ ದೇವಾಲಯಕ್ಕೆ ತಲುಪಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.