ಮಡಿಕೇರಿ, ಡಿ. ೧೯: ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ಧಿ ಹೊಂದಿರುವ ಈರಳೆವಳಮುಡಿ ಶಾಖೆಯ ಕಟ್ಟಡ ಜ. ೧೫ ರಂದು ಉದ್ಘಾಟನೆಗೊಳ್ಳಲಿದೆ.

ಶಿಥಿಲಾವಸ್ಥೆಗೊಂಡಿದ್ದ ಹಳೆಯ ಕಟ್ಟಡವನ್ನು ಅಭಿವೃದ್ಧಿಪಡಿಸಲಾಗಿದ್ದು, ವಾಯುಪುತ್ರ ಭವನ ಎಂದು ಹೆಸರಿಡಲಾಗಿದೆ. ಇದಕ್ಕೆ ಪೂರಕವಾಗಿ ಕಟ್ಟಡದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಪಂಚಮುಖದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಕಾರ್ಕಳದ ಗುಣೇಶ್ವರ ಶಿಲ್ಪಿಗಳು ಪಂಚಮುಖಿ ಆಂಜನೇಯನ ಮೂರ್ತಿಯನ್ನು ಕೆತ್ತನೆ ಮಾಡಿದ್ದಾರೆ. ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ನರೇಂದ್ರಮೋದಿ ಭವನ ನಿರ್ಮಿಸಿ ಕಾವೇರಿ, ಪಶುಪತಿ, ಪುಣ್ಯಕೋಟಿ ದೇವರುಗಳ ಮೂರ್ತಿ ಪ್ರತಿಷ್ಠಾಪಿಸಿ ಸಂಘದ ಅಧ್ಯಕ್ಷ ಮಣಿಉತ್ತಪ್ಪ ಗಮನ ಸೆಳೆದಿದ್ದರು. ಇದರೊಂದಿಗೆ ಕಾಫಿ ಗುಣಮಟ್ಟ ಪರೀಕ್ಷಾ ಕೇಂದ್ರ ಮತ್ತು ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಸಿಮೆಂಟ್, ಗೊಬ್ಬರ, ಸುಣ್ಣ, ಔಷಧಿ ಸೇರಿದಂತೆ ಕೃಷಿಗೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳು ಸಂಘದ ಕಟ್ಟಡದಲ್ಲೇ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ. ಶುದ್ಧ ಕುಡಿಯುವ ನೀರಿನ ಕೇಂದ್ರವನ್ನು ಕೂಡ ಸ್ಥಾಪಿಸಲಾಗಿದೆ. ಪ್ರತಿಯೊಂದು ಸೌಲಭ್ಯವೂ ಒಂದೇ ಸೂರಿನಡಿ ದೊರೆಯಬೇಕು, ಆ ಮೂಲಕ ಕೃಷಿಕ ವರ್ಗಕ್ಕೆ ಅನುಕೂಲ ಮತ್ತು ಲಾಭ ಮಾಡಿಕೊಡಬೇಕು ಎನ್ನುವುದು ನನ್ನ ಉದ್ದೇಶ ಎಂದು ಮಣಿಉತ್ತಪ್ಪ ತಿಳಿಸಿದರು. ಸುಮಾರು ೧.೧೦ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನರೇಂದ್ರಮೋದಿ ಭವನ ಸಾರ್ವಜನಿಕರಿಗೆ ಸಹಕಾರಿಯಾಗಿದೆ. ಯಾವುದೇ ಮೂಲದಿಂದ ಸಾಲ ಮಾಡದೆ ಕೃಷಿಕರು ಹಾಗೂ ದಾನಿಗಳ ಸಹಕಾರದಿಂದ ಭವನವನ್ನು ನಿರ್ಮಿಸಿರುವುದು ವಿಶೇಷ. ಇದೀಗ ಈರಳೆವಳಮುಡಿ ಶಾಖೆಯ ಕಟ್ಟಡ ಉದ್ಘಾಟನೆಗೆ ಸಜ್ಜುಗೊಂಡಿದ್ದು, ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ.