ಕಣಿವೆ, ಡಿ. ೧೯: ೧೨ನೇ ಶತಮಾನದಲ್ಲಿ ಶರಣರೊಡಗೂಡಿ ಸಮಾಜೋದ್ಧಾರಕರಾಗಿ, ಆಂದೋಲನದ ಹರಿಕಾರರಾಗಿ, ಭಾರತೀಯ ವ್ಯಕ್ತಿ ಕೇಂದ್ರಿತ ಸಿದ್ಧಾಂತ ಬದಲಿಸಿ ಸಮಾಜ ಕೇಂದ್ರಿತ ಸಿದ್ದಾಂತದ ಸಂಸ್ಥಾಪಕರಾಗಿ, ಕಾಯಕ, ದಾಸೋಹಗಳ ಮೂಲಕ ವಿಶ್ವಗುರುವಾಗಿ ಬೆಳೆದು ನಿಂತವರು ಬಸವಣ್ಣನವರು ಎಂದು ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಸಿ. ಸೋಮಶೇಖರ್ ಬಣ್ಣಿಸಿದರು.
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ಸಹಯೋಗದೊಂದಿಗೆ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯ ಕುವೆಂಪು ಭಾಷಾ ಕನ್ನಡ ಸಂಘದ ವತಿಯಿಂದ ಶಾಲೆಯ ರಾಷ್ಟಿçÃಯ ಸೇವಾ ಯೋಜನೆ (ಎನ್.ಎಸ್.ಎಸ್.), ಎಸ್.ಡಿ.ಎಂ.ಸಿ. ಹಾಗೂ ವಿದ್ಯಾರ್ಥಿ ಸಂಘದ ವತಿಯಿಂದ ‘ವಚನಗಳಲ್ಲಿ ಸಾಮಾಜಿಕ ಚಿಂತನೆಗಳು’ ಕುರಿತು ಏರ್ಪಡಿಸಿದ್ದ ಉಪನ್ಯಾಸ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ವಚನ ಸಾಹಿತ್ಯವು ಸಮಾಜದ ಮತ್ತು ನಮ್ಮ ಬದುಕಿನ ಸಾಹಿತ್ಯವಾಗಿದೆ. ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ, ಆರ್ಥಿಕ, ಧಾರ್ಮಿಕ, ನೈತಿಕ, ರಾಜಕೀಯ, ಪ್ರಗತಿಪರ ನಡೆ-ನುಡಿ, ಮಾನವೀಯತೆ, ಮೂಢನಂಬಿಕೆ ಹಾಗೂ ಶೋಷಣೆ ಮತ್ತು ಕಾಯಕ ಹಾಗೂ ದಾಸೋಹದ ಬಗ್ಗೆ ಸಾಮಾಜಿಕ ಕ್ರಾಂತಿ ಮೂಡಿಸಿ ಸಮಸಮಾಜಕ್ಕೆ ವಚನಗಳ ಮೂಲಕ ಮುನ್ನುಡಿ ಬರೆದರು ಎಂದರು.
ಬಸವಣ್ಣನವರ ಕಾಲದಲ್ಲಿ ಕಂಡು ಬರುವ ಸಾಮಾಜಿಕ ಅಸಮಾನತೆ, ಜಾತಿ ಪದ್ಧತಿ, ಮೂಢನಂಬಿಕೆಗಳು, ರಾಜಕೀಯ ಸ್ಥಿರತೆ, ಆರ್ಥಿಕ ಅಸಮಾನತೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ವರ್ಗದವರಿಗೆ ಹೆಚ್ಚಿನ ಅವಕಾಶವಿಲ್ಲದಿರುವುದನ್ನು ಕಂಡ ಬಸವಣ್ಣನವರು ಹೊಸ ಸಮಾಜವನ್ನು ನಿರ್ಮಿಸುವುದರ ಮೂಲಕ ಸಮಾನತೆ ಯನ್ನು ತರಲು ಪ್ರಯತ್ನಿಸಿದರು ಎಂದು ಡಾ. ಸೋಮಶೇಖರ್ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್, ೧೨ನೇ ಶತಮಾನದ ಶರಣರು ಸಮಾಜಕ್ಕೆ ವಚನಗಳ ಮೂಲಕ ನೀಡಿದ ಸಾಮಾಜಿಕ ಚಿಂತನೆಯ ವಿಚಾರಧಾರೆಗಳನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡುವ ಮೂಲಕ ಉತ್ತಮ ವ್ಯಕ್ತಿತ್ವ ಬೆಳೆಸಿ ಕೊಳ್ಳಬೇಕು ಎಂದರು. ಎಸ್ಡಿಎಂಸಿ ಅಧ್ಯಕ್ಷ ಎಸ್.ಎನ್. ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ಮೂರ್ತಿ, ಪ್ರಾಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಸೋಮಶೇಖರ್ ಗಾಂಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯೋಜಕ ಮಣಜೂರು ಮಂಜುನಾಥ್, ಸರ್ವಮಂಗಳ ಸೋಮಶೇಖರ್, ಸ್ಥಳೀಯರಾದ ಕೆ.ಎಸ್. ರಾಜಾಚಾರಿ, ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಬಿ.ಡಿ. ರಮ್ಯ, ಎಸ್.ಎಂ. ಗೀತಾ, ಅನ್ಸಿಲಾ ರೇಖಾ, ನಯನ ಇದ್ದರು. ಶಿಕ್ಷಕಿ ಅನ್ಸಿಲಾ ರೇಖಾ ನಿರ್ವಹಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು.