ಮಡಿಕೇರಿ, ಡಿ. ೧೭: ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ತಾ. ೨೪ ಮತ್ತು ೨೫ ರಂದು ಮಡಿಕೇರಿಯ ರಾಜಾಸೀಟ್ ಉದ್ಯಾನವನದಲ್ಲಿ ಜೇನು ಉತ್ಸವ ನಡೆಯಲಿದೆ.

ಕೊಡಗಿನ ಜೇನು ತುಪ್ಪ ತನ್ನದೇ ಆದ ವಿಶಿಷ್ಟ ಗುಣಗಳನ್ನು ಹೊಂದಿದ್ದು ಇಲ್ಲಿನ ಜೇನಿಗೆ ದೇಶ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ಕೊಡಗಿನಲ್ಲಿ ಜೇನು ಕೃಷಿಯನ್ನು ಉತ್ತೇಜನಗೊಳಿಸಲು ಜೇನು ಬೆಳೆಗಾರರು, ವಿಜ್ಞಾನಿಗಳು, ಜೇನು ಕೃಷಿ ಅಧಿಕಾರಿಗಳು ಹಾಗೂ ಜೇನು ಸೊಸೈಟಿ ಮತ್ತು ಜೇನು ಪರಿಕರ ತಯಾರಕರು, ಜೇನು ತುಪ್ಪ ಉತ್ಪಾದನೆ ಕಂಪನಿಯನ್ನು ಒಂದೇ ವೇದಿಕೆಗೆ ತಂದು ಕೊಡಗಿನ ಜೇನನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಜೇನು ಉತ್ಸವವನ್ನು ಆಯೋಜಿಸಲಾಗಿದೆ.

ಜೇನು ಉತ್ಸವದಲ್ಲಿ ವಿವಿಧ ಜೇನು ಉತ್ಪಾದನೆ ಮಾಡುವ ಕೃಷಿಕರು, ಜೇನು ಸಂಘ ಸಂಸ್ಥೆಗಳು, ಜೇನು ತುಪ್ಪ ಉತ್ಪಾದನೆ ಮಾಡುವ ರೈತ ಉತ್ಪಾದನಾ ಕಂಪೆನಿಗಳು, ಜೇನು ಪೆಟ್ಟಿಗೆ, ಜೇನು ಮೇಣ , ಜೇನು ನೊಣ, ಜೇನು ಉಪ ಉತ್ಪನ್ನ ತಯಾರಿಕೆ ಮಾಡುವ ಕಂಪೆನಿಗಳನ್ನು ಜೇನು ಮೇಳದಲ್ಲಿ ಆಹ್ವಾನಿಸಲಾಗಿದೆ.

ಸ್ಥಳೀಯ ಸಂಶೋಧನಾ ಕೇಂದ್ರದ ವಿಜ್ಞಾನಿಗಳು, ಅರಣ್ಯ ಕಾಲೇಜಿನ ಜೇನು ವಿಭಾಗದ ವಿಜ್ಞಾನಿಗಳು ಹಾಗೂ ಇಲಾಖೆಯ ಜೇನು ಕೃಷಿ ಅಧಿಕಾರಿಗಳಿಂದ ಜೇನು ಸಾಕಾಣಿಕೆ ಬಗ್ಗೆ ತಾಂತ್ರಿಕ ಮಾಹಿತಿ ಹಾಗೂ ಪ್ರದರ್ಶನ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ತೋಟಗಾರಿಕೆ ಉಪನಿರ್ದೇಶಕರಾದ ಚಕ್ಕೇರ ಪ್ರಮೋದ್ (೯೪೮೩೧೧೦೬೨೧) ಹಾಗೂ ಜೇನು ಕೃಷಿ ಅಭಿವೃದ್ಧಿ ಅಧಿಕಾರಿ ವಸಂತ್ (೯೪೪೯೦೭೫೦೭೭) ಅವರನ್ನು ಸಂಪರ್ಕಿಸಲು ಪ್ರಕಟಣೆ ಕೋರಿದೆ.