ಗೋಣಿಕೊಪ್ಪ ವರದಿ, ಡಿ. ೧೭ : ೪ ದಿನಗಳ ಹಿಂದೆ ಸುರಿದ ಮಳೆಗೆ ಹಳ್ಳಿಗಟ್ಟು ಗ್ರಾಮದ ಬಿ. ಎಸ್. ಚಂದ್ರಶೇಖರ್ ಅವರ ಕಣದಲ್ಲಿ ಹಾಕಿದ್ದ ಭತ್ತ ಮೊಳಕೆಯೊಡೆದು ಸುಮಾರು ೬೦ ಸಾವಿರಕ್ಕೂ ಅಧಿಕ ನಷ್ಟ ಉಂಟಾಗಿದೆ.
ತಾ. ೧೩ ರಂದು ರಾತ್ರಿ ದಿಢೀರ್ ಮಳೆ ಕಾಣಿಸಿಕೊಂಡ ಕಾರಣ, ಕೊಯ್ಲು ಮಾಡಿದ್ದ ಭತ್ತವನ್ನು ಕಣದಲ್ಲಿ ಹಾಕಿದ್ದರು. ನಿರಂತರ ಮಳೆಯಿಂದಾಗಿ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿಟ್ಟಿದ್ದರು. ಮಳೆ ನಿಂತ ನಂತರ ಒಣಗಿಸಲು ತೆರೆದಾಗ ಭತ್ತ ಮೊಳಕೆಯೊಡೆದಿರುವುದು ಕಂಡು ಬಂದಿದೆ. ೨.೫ ಎಕರೆ ಗದ್ದೆಯಲ್ಲಿ ತುಂಗ ಬೆಳೆ ಬೆಳೆದಿದ್ದು, ಸುಮಾರು ೩೦ ಕ್ವಿಂಟಾಲ್ ಭತ್ತ ನಷ್ಟವಾಗಿದೆ. ಕುಚ್ಚಲಕ್ಕಿ ಮಾಡಲು ಕೂಡ ಇಲ್ಲಿ ಸರಿಯಾದ ಮೂಲಭೂತ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ. ಬಿತ್ತನೆ, ನಾಟಿ, ಗೊಬ್ಬರ ಸೇರಿ ಸುಮಾರು ೬೦ ಸಾವಿರ ವೆಚ್ಚ ಮಾಡಿದ್ದು, ನಷ್ಟ ಸರಿದೂಗಿಸಲು ಆಗದೆ ಪರದಾಡುವಂತಾಗಿದೆ. ಸರಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.