ಮಡಿಕೇರಿ, ಡಿ. ೧೭: ಒಳ ಮೀಸಲಾತಿ ಜಾರಿಗೆ ಅನುಕೂಲವಾಗುವಂತೆ ಸಂವಿಧಾನದ ಪರಿಚ್ಛೇದ ೩೪೧ಕ್ಕೆ ಸೂಕ್ತ ತಿದ್ದುಪಡಿಯನ್ನು ಈಗ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ತರಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕೊಡಗು ಜಿಲ್ಲಾ ಘಟಕ ಜಿಲ್ಲಾಡಳಿತದ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಿದೆ.
ಎಸ್ಡಿಪಿಐ ಜಿಲ್ಲಾಧ್ಯಕ್ಷ ಕಲೀಲ್ ಮಡಿಕೇರಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರಿಗೆ ಮನವಿ ಸಲ್ಲಿಸಿದ ಪ್ರಮುಖರು ಸರ್ಕಾರ ಶೀಘ್ರ ಒಳ ಮೀಸಲಾತಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಜಾತಿ ವ್ಯವಸ್ಥೆಯ ಕಾರಣಕ್ಕೆ ಶತಮಾನಗಳಿಂದ ಅವಕಾಶ ವಂಚಿತರಾದ ಸಮುದಾಯಗಳನ್ನು ಮೇಲೆತ್ತುವ ಉದ್ದೇಶದಿಂದ ದೇಶದಲ್ಲಿ ಮೀಸಲಾತಿ ಜಾರಿಯಲ್ಲಿದೆ. ಆದರೆ ಜಾತಿ ವ್ಯವಸ್ಥೆ ಅತ್ಯಂತ ಸಂಕೀರ್ಣವಾದುದಾದ್ದರಿAದ ಮೀಸಲಾತಿ ಮೂಲಕ ಸಿಗಬೇಕಾದ ಅನುಕೂಲ ಮತ್ತು ಸೌಲಭ್ಯಗಳು ಎಲ್ಲ ಸಮುದಾಯಗಳಿಗೂ ಸಮಾನವಾಗಿ ದೊರೆಯುವುದು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ಹಲವು ರಾಜ್ಯಗಳು ಒಳ ಮೀಸಲಾತಿ ವ್ಯವಸ್ಥೆಯನ್ನು ಜಾರಿ ಮಾಡಿದವು.
ಆದರೆ ಸುಪ್ರೀಂ ಕೋರ್ಟ್ ಈ ಒಳ ಮೀಸಲಾತಿ ವ್ಯವಸ್ಥೆಯನ್ನು ರಾಜ್ಯಗಳ ಅಧಿಕಾರದ ಪರಿಧಿಯನ್ನು ಮೀರಿದ ಕಾಯಿದೆ ಎಂದು ರದ್ದು ಮಾಡಿತು. ಆ ಹಕ್ಕು ಕೇವಲ ಒಕ್ಕೂಟ ಸರ್ಕಾರಕ್ಕೆ ಮಾತ್ರ ಇದೆ ಎಂದು ತನ್ನ ಆದೇಶದಲ್ಲಿ ಹೇಳಿತು. ಕೆಲವು ರಾಜ್ಯ ಸರ್ಕಾರಗಳು ಅದನ್ನು ಬೇರೆ ರೀತಿಯಲ್ಲಿ ಜಾರಿ ಮಾಡುವ ಪ್ರಯತ್ನ ಮಾಡಿದವು. ಆ ಮೂಲಕ ಮೀಸಲಾತಿಯ ಆವರಣದಲ್ಲಿದ್ದು ಕೂಡ ಮೀಸಲಾತಿಯ ಫಲಗಳನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗದ ಸಮುದಾಯಗಳು ಮೀಸಲಾತಿಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವಂತೆ ನೋಡಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತಂದಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಅಂತಹ ಯಾವ ವ್ಯವಸ್ಥೆಯು ಜಾರಿಯಲ್ಲಿ ಇಲ್ಲದ ಕಾರಣ ಮೀಸಲಾತಿಯ ಸೌಲಭ್ಯ ಮತ್ತು ಸೌಕರ್ಯಗಳನ್ನು ಕೆಲವು ಜಾತಿಗಳು ಹೆಚ್ಚಾಗಿ ಅನುಭವಿಸುತ್ತಿದ್ದರೆ, ಕೆಲವು ಜಾತಿಗಳಿಗೆ ಆ ಸೌಲಭ್ಯ, ಸೌಕರ್ಯಗಳನ್ನು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಪಡೆಯುವುದು ಸಾಧ್ಯವಾಗಿಲ್ಲ ಎಂದು ಕಲೀಲ್ ಮಡಿಕೇರಿ ಅಭಿಪ್ರಾಯಪಟ್ಟರು. ಹಾಗಾಗಿ ಒಳ ಮೀಸಲಾತಿಯನ್ನು ತಕ್ಷಣ ಜಾರಿಯಾಗುವಂತೆ ಸೂಕ್ತ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶಾಶ್ವತ ಪರಿಹಾರವಾಗಿ ಸಂವಿಧಾನದ ಪರಿಚ್ಛೇದ ೩೪೧ಕ್ಕೆ ಒಕ್ಕೂಟ ಸರ್ಕಾರ ಸೂಕ್ತ ತಿದ್ದುಪಡಿಯನ್ನು ತರುವ ಮೂಲಕ ಒಳ ಮೀಸಲಾತಿ ಜಾರಿಗೆ ಅನುವು ಮಾಡಿಕೊಡಬೇಕು. ಈ ತಿದ್ದುಪಡಿಯನ್ನು ಈಗ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ತರಬೇಕು ಎಂದು ಕಲೀಲ್ ಒತ್ತಾಯಿಸಿದರು. ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯರು ಹಾಗೂ ನಗರಸಭಾ ಸದಸ್ಯರಾದ ಮನ್ಸೂರ್, ಬಶೀರ್ ಹಾಗೂ ನಗರಾಧ್ಯಕ್ಷ ರಿಜ್ವಾನ್ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.