ಮಡಿಕೇರಿ, ಡಿ. ೧೮: ಕೊಡಗು ಜಿಲ್ಲೆಯಲ್ಲಿರುವ ಮಾಜಿ ಸೈನಿಕರು ಹಲವು ಬೇಡಿಕೆಗಳನ್ನು ಜಿಲ್ಲಾಡಳಿತದ ಮುಂದಿಟ್ಟಿದ್ದಾರೆ. ಇವುಗಳ ಬಗ್ಗೆ ಈ ಬಾರಿ ನಡೆಯುವ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವುದಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭರವಸೆ ನೀಡಿದ್ದಾರೆ.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಾಜಿ ಸೈನಿಕರಿಗೆ ಹಾಗೂ ಅವರ ಕುಟುಂಬ ವರ್ಗದವರಿಗಾಗಿ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ವರ್ಷದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯ ತವರೂರು ಮತ್ತು ಯೋಧರ ನೆಲೆಬೀಡಾಗಿರುವ ಕೊಡಗಿನ ಯೋಧರು ದೇಶಕ್ಕಾಗಿ ತ್ಯಾಗ, ಬಲಿದಾನಗೈದಿದ್ದಾರೆ. ಫೀ.ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರುಗಳು ಸೇನೆಯ ನೇತೃತ್ವ ವಹಿಸಿ ವಿಶ್ವದ ಗಮನ ಸೆಳೆದಿದ್ದಾರೆ. ಪುಟ್ಟ ಜಿಲ್ಲೆ ಕೊಡಗು ಸೇನಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ.
ಜಿಲ್ಲೆಯ ಮಾಜಿ ಯೋಧರುಗಳಿಗೆ ಅನೇಕ ಸಮಸ್ಯೆಗಳಿವೆ ಮತ್ತು ವಿವಿಧ ಬೇಡಿಕೆಗಳ ಬಗ್ಗೆ ಪ್ರಸ್ತಾಪಿಸುತ್ತಲೇ ಇದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ದೇಶವನ್ನು ರಕ್ಷಿಸುವ ಯೋಧರಿಗೆ ಮೊದಲ ಆದ್ಯತೆ ನೀಡುತ್ತಿದೆ. ಪ್ರಧಾನಮಂತ್ರಿಗಳು ‘ಒನ್ ರ‍್ಯಾಂಕ್ ಒನ್ ಪೆನ್‌ಷನ್’ ಬೇಡಿಕೆಯನ್ನು ವಿಳಂಬ ಮಾಡದೆ ಈಡೇರಿಸಿದ್ದಾರೆ ಎಂದರು.
ನಿವೃತ್ತಿಯಾದ ನಂತರ ನೆಮ್ಮದಿಯ ಬದುಕು ಸಾಗಿಸಬೇಕೆಂದು ಮಾಜಿ ಸೈನಿಕರು ಕೃಷಿಯನ್ನು ಅವಲಂಭಿಸುತ್ತಾರೆ. ಇದಕ್ಕಾಗಿ ಕೃಷಿ ಭೂಮಿ ಬೇಕು ಮತ್ತು ವಾಸಕ್ಕೆ ನಿವೇಶನಕ್ಕೆ ಬೇಕು ಎನ್ನುವ ಬೇಡಿಕೆ ಇದೆ. ಸಾಮಾಜಿಕ ಅರಣ್ಯವಾಗಿ ಮಾರ್ಪಟ್ಟಿರುವ
(ಮೊದಲ ಪುಟದಿಂದ) ಜಿಲ್ಲೆಯ ಕಂದಾಯ ಭೂಮಿಯನ್ನು ಮರಳಿ ಪಡೆದು ಜಮೀನಿಗಾಗಿ ಅರ್ಜಿ ಸಲ್ಲಿಸಿದವರಿಗೆ ಹಂಚಿಕೆ ಮಾಡುವ ಬಗ್ಗೆ ಚಿಂತನೆ ಇದೆ. ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಭೂಮಿ ಕಂದಾಯ ಇಲಾಖೆಗೆ ಶೀಘ್ರ ಮರಳಲಿದೆ ಎಂಬ ವಿಶ್ವಾಸವಿದೆ ಎಂದು ಬೋಪಯ್ಯ ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ದೇಶದ ರಕ್ಷಣೆಗಾಗಿ ಶ್ರಮಿಸಿ ನಿವೃತ್ತರಾದ ಯೋಧರಿಗಾಗಿ ನನ್ನಿಂದಾದ ಉತ್ತಮ ಕಾರ್ಯವನ್ನು ನಾನು ಮಾಡಲೇಬೇಕಾಗಿದೆ. ಈ ಪ್ರಕ್ರಿಯೆ ಪ್ರಗತಿಯಲ್ಲಿದೆ, ಈಗಲೇ ಏನನ್ನೂ ಹೇಳಲಾರೆ, ಆದ ಮೇಲೆ ಘೋಷಿಸುವೆ ಎಂದರು. ಒಗ್ಗಟ್ಟು ಮತ್ತು ಸಂಘಟನೆಯಿAದ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕೆ.ಪಿ. ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟçಮಟ್ಟದ ಪದಕ ವಿಜೇತ ಕ್ರೀಡಾಪಟು ಹಾಗೂ ಮಾಜಿ ಸೈನಿಕ ಬಾರನ ರಂಗನಾಥ್, ಸಂಘದ ಉಪಾಧ್ಯಕ್ಷ ಸುಧೀರ್, ಮಡಿಕೇರಿ ನಗರ ಅಧ್ಯಕ್ಷ ಪಾಣಿಕುಟ್ಟಿರ ಕುಟ್ಟಪ್ಪ, ಕೊಡಗು ಗೌಡ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ತಳೂರು ಕಾಳಪ್ಪ, ಕ್ರೀಡಾ ಸಮಿತಿ ಸದಸ್ಯರಾದ ಸಿ.ಜಿ. ತಿಮ್ಮಯ್ಯ, ನಾಟೋಳಂಡ ಸೋಮಯ್ಯ ಮತ್ತಿತರರು ಉಪಸ್ಥಿತರಿದ್ದರು.
ಅಂತರರಾಷ್ಟಿçÃಯ ಮಟ್ಟದ ಪದಕ ವಿಜೇತ ಕ್ರೀಡಾಪಟು ಹಾಗೂ ಮಾಜಿ ಸೈನಿಕ ಹೆಚ್.ಎ. ಚಿಣ್ಣಪ್ಪ ಅವರು ನಗರದ ಓಂಕಾರೇಶ್ವರ ದೇವಾಲಯದ ಬಳಿಯಿಂದ ಜಿಲ್ಲಾ ಕ್ರೀಡಾಂಗಣದ ವರೆಗೆ ಕ್ರೀಡಾಜ್ಯೋತಿಯನ್ನು ತಂದರು.
ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಜಿಲ್ಲೆಯ ಎಲ್ಲಾ ಮಾಜಿ ಸೈನಿಕರು, ವಿಧವಾ ವೇತನ ಪಡೆಯುತ್ತಿರುವ ಮಾಜಿ ಸೈನಿಕರ ಪತ್ನಿಯರು ಹಾಗೂ ಅವರ ಮಕ್ಕಳಿಗಾಗಿ ಕ್ರೀಡಾಕೂಟ ನಡೆಯಿತು.
ಕ್ರೀಡಾಂಗಣದ ಸಮೀಪದ ಅರಸು ಭವನದಲ್ಲಿ ಮಾಜಿ ಯೋಧರು ಹಾಗೂ ಅವರ ಕುಟುಂಬದವರಿಗೆ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.