ವೀರಾಜಪೇಟೆ, ಡಿ. ೧೭: ಪುರಸಭೆಯ ಸಿಬ್ಬಂದಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಅವರಿಗೆ ವಸತಿ ಸೌಲಭ್ಯ ಸಹಿತ ಅಗತ್ಯ ಸವಲತ್ತು ನೀಡಲು ಸರಕಾರ ಆಸಕ್ತಿ ವಹಿಸಿ ನೂತನ ವಸತಿಗೃಹ ಎಸ್‌ಎಫ್‌ಸಿ ವಿಶೇಷ ಅನುದಾನದಡಿಯಲ್ಲಿ ನಿರ್ಮಿಸಲಾಗಿದೆ ಎಂದು ವೀರಾಜ ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
೨೦೧೯-೨೦ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನ ದಡಿಯಲ್ಲಿ ವೀರಾಜಪೇಟೆಯ ಪುರಸಭೆಯ ಸಿಬ್ಬಂದಿಗಳಿಗೆ ನೂತನವಾಗಿ ನಿರ್ಮಾಣಗೊಂಡ ೧೧೦.೦೦ ಲಕ್ಷ ವೆಚ್ಚದ ನೂತನ ವಸತಿಗೃಹವನ್ನು ಲೋಕಾರ್ಪಣೆಗೈದು ಅವರು ಮಾತನಾಡಿ, ಪಟ್ಟಣದ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ಸರಕಾರದಿಂದ ತರುವ ಪ್ರಯತ್ನ ನಡೆಸಲಾಗುತ್ತಿದೆ. ಇನ್ನು ಹಲವು ಯೋಜನೆಗಳ ಅನುಷ್ಠಾನ ಹಂತದಲ್ಲಿದೆ ಎಂದರು.
ವಸತಿ ಗೃಹದ ಉದ್ಘಾಟನೆ ವೇಳೆ ಜಿಲ್ಲಾಧಿಕಾರಿ ಬಿ.ಸಿ ಸತೀಶ, ತಾಲೂಕು ತಹಶೀಲ್ದಾರ್ ಅರ್ಚನಾ ಭಟ್, ಪುರಸಭೆ ಮುಖ್ಯಾಧಿಕಾರಿ ಎ. ಚಂದ್ರ ಕುಮಾರ್, ಅಭಿಯಂತರ ಹೇಮ್ ಕುಮಾರ್, ಪುರಸಭೆ ಅಧ್ಯಕ್ಷೆ ಟಿ.ಆರ್. ಸುಶ್ಮಿತಾ, ಪುರಸಭೆ ಚುನಾಯಿತ ಪ್ರತಿನಿಧಿಗಳು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ಬಿಜೆಪಿಯ ಪ್ರಮುಖರಾದ ಪಟ್ರಪಂಡ ರಘು ನಾಣಯ್ಯ, ಪುರಸಭೆ ಸಿಬ್ಬಂದಿಗಳು, ಪೌರಕಾರ್ಮಿಕರು, ಕಂದಾಯ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಶಿವಕೇರಿಯ ನಿವಾಸಿಗಳು ಹಾಜರಿದ್ದರು.