ಮಡಿಕೇರಿ, ಡಿ. ೧೭: ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರ‍್ವತೊಕ್ಲು ಗ್ರಾಮದಲ್ಲಿ ಶಾಸಕರ ನಿಧಿಯಿಂದ ಪೂಜಾರೀರ ಕುಟುಂಬದ ಐನ್‌ಮನೆಗೆ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಅತಿವೃಷ್ಟಿಯಿಂದ ತೊಂದರೆ ಗೊಳಗಾದವರಿಗೆ ಈಗಾಗಲೇ ೧೧೪ ಕೋಟಿ ಬಿಡುಗಡೆಯಾಗಿದ್ದು, ೫೨ ಸಾವಿರ ಮಂದಿ ರೈತರಿಗೆ ಪರಿಹಾರ ನೀಡಲಾಗುತ್ತಿದೆ. ಜಲಜೀವನ್ ಮಿಷನ್‌ನಡಿ ಜಿಲ್ಲೆಗೆ ೩೫೦ ಕೋಟಿ ಬಿಡುಗಡೆಯಾಗಿದ್ದು, ಪ್ರತಿ ಮನೆಗಳಿಗೆ ಕುಡಿಯುವ ನೀರನ್ನೊದಗಿಸಲಾಗುತ್ತಿದೆ. ಮನೆ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ೭೦೦ ಕೋಟಿ ಅನುದಾನದಲ್ಲಿ ಯೋಜನೆ ರೂಪಿಸಲಾಗಿದೆ. ಹತ್ತು ಹೆಚ್‌ಪಿ ಒಳಗಿನ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕಲ್ಪಿಸುವ ಬಗ್ಗೆ ನಿರ್ಧಾರ ತಳೆಯಲಾಗಿದ್ದು, ಸ್ವಲ್ಪ ಗೊಂದಲದಲ್ಲಿದೆ. ಅದನ್ನು ಸರಿಪಡಿಸಿ ಕಲ್ಪಿಸಲಾಗುವದು. ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವ ಸಲುವಾಗಿ ಸಂಜೀವಿನಿ ಒಕ್ಕೂಟದವರಿಗೆ ಶುನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ವಿದ್ಯಾನಿಧಿಯಡಿ ರೂ. ೨ ಸಾವಿರದಿಂದ ೧೦ ಸಾವಿರದವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದರು.
ಬಾರತೀಯ ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್‌ಕುಮಾರ್ ಕೆಲಸಗಳು ಬಾಕಿ ಇದ್ದು, ಈ ಬಗ್ಗೆ ಶಾಸಕರಿಗೆ ಪಟ್ಟಿ ನೀಡಲಾಗಿದೆ. ಅನುದಾನ ಒದಗಿಸುವ ಭರವಸೆಯನ್ನು ಶಾಸಕರು ನೀಡಿರುವದಾಗಿ ಹೇಳಿದರು.
ಇದೇ ಸಂದರ್ಭ ಪೂಜಾರಿರ ಕುಟುಂಬದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶಾಸಕ ಬೋಪಯ್ಯ ಅವರನ್ನು ಸನ್ಮಾನಿಸಲಾಯಿತು. ಪೂಜಾರಿರ ಕುಟುಂಬದ ಹಿರಿಯರಾದ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಬೆಟ್ಟಗೇರಿ ಗ್ರಾ.ಪಂ. ಉಪಾಧ್ಯಕ್ಷ ಕೃಷ್ಣಪ್ಪ, ಸದಸ್ಯ ತಳೂರು ದಿನೇಶ್‌ಕುಮಾರ್, ಮಾಜಿ ಸದಸ್ಯ ಕಡ್ಯದ ವಿಜಯ, ತಾ.ಪಂ. ಮಾಜಿ ಸದಸ್ಯೆ ತುಂತಜೆ ಕುಮುದ ರಶ್ಮಿ, ಜಿಲ್ಲಾ ಬಿಜೆಪಿ ಕೃಷಿ ಮೋರ್ಚಾ ಉಪಾಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಸದಸ್ಯ ತುಂತಜೆ ರವಿ ಧರ್ಮಪಾಲ, ಪೂಜಾರಿರ ಬೆಳ್ಯಪ್ಪ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಪೂಜಾರಿರ ಪ್ರಮೋದಿನಿ ತಿರುಮಲೇಶ್ ಪ್ರಾರ್ಥಿಸಿದರೆ, ಪ್ರೊ. ಪದ್ಮನಾಭ ಸ್ವಾಗತಿಸಿದರು. ಪುಷ್ಪಲತಾ ಜಗದೀಶ್ ನಿರೂಪಿಸಿದರೆ, ಶಿಕ್ಷಕಿ ಯಶಿಕಾ ಮಿಥುನ್ ವಂದಿಸಿದರು.