ಸೋಮವಾರಪೇಟೆ, ಡಿ. ೧೪: ಶಿಸ್ತು, ಸಂಯಮ, ಸಮಯಪಾಲನೆ, ಕಲಿಕಾ ಆಸಕ್ತಿಯಿರುವ ಮಕ್ಕಳು ಜೀವನದಲ್ಲಿ ಸಾಧನೆಯೊಂದಿಗೆ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮುತ್ತಾರೆ ಎಂದು ಮಡಿಕೇರಿ ಆಕಾಶವಾಣಿ ನಿರ್ದೇಶಕ ಡಾ. ವಿಜಯ್ ಅಂಗಡಿ ಅಭಿಪ್ರಾಯಿಸಿದರು.

ಇಲ್ಲಿನ ವಿಶ್ವಮಾನವ ಕುವೆಂಪು ಶಾಲೆಯಲ್ಲಿ ಆಯೋಜಿಸಿದ್ದ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಹುಡುಕಿ ಪ್ರೋತ್ಸಾಹ ನೀಡಬೇಕಿರುವುದು ಪೋಷಕರು ಮತ್ತು ಶಿಕ್ಷಕರ ಕರ್ತವ್ಯ. ವಿದ್ಯೆ ಕಲಿಸಲು ವ್ಯಯಿಸುವ ಹಣ ಇಡೀ ಕುಟುಂಬವನ್ನು ಉತ್ತುಂಗಕ್ಕೆ ತಲುಪಿಸುತ್ತದೆ. ಪೋಷಕರ ಒಳ್ಳೆಯ ಗುಣಗಳು ಮಕ್ಕಳ ವ್ಯಕ್ತಿತ್ವ ರೂಪಿಸುತ್ತವೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎ.ಆರ್. ಮುತ್ತಣ್ಣ, ಕುವೆಂಪು ವಿದ್ಯಾ ಸಂಸ್ಥೆಯ ಭಾತ್ಮೀದಾರರಾದ ಕೆ.ಎಂ. ಜಗದೀಶ್, ಕಾರ್ಯದರ್ಶಿ ಎನ್.ಬಿ. ಗಣಪತಿ, ಖಜಾಂಚಿ ಜಿ.ಪಿ. ಲಿಂಗರಾಜು, ಪದಾಧಿಕಾರಿಗಳಾದ ಎಸ್.ಜಿ. ಮೇದಪ್ಪ, ಕೆ.ಟಿ. ಪರಮೇಶ್, ನಂದಕುಮಾರ್, ಮಾದಪ್ಪ, ನಿರ್ಮಲಾ ಪ್ರಕಾಶ್, ಜಲಾ ಹೂವಯ್ಯ, ಎಸ್.ಬಿ. ಭರತ್ ಕುಮಾರ್, ಕೆ.ಕೆ. ಮಂಜುನಾಥ್ ಕುಮಾರ್, ಡಿ.ಎಸ್. ಚಂಗಪ್ಪ, ಪಿ.ಕೆ. ರವಿ, ಮುಖ್ಯೋಪಾಧ್ಯಾಯರಾದ ಮಿಲ್‌ಗ್ರೆಡ್ ಗೋನ್ಸಾಲ್ವೆಸ್ ಉಪಸ್ಥಿತರಿದ್ದರು.