ವೀರಾಜಪೇಟೆ, ಡಿ. ೧೩: ರಕ್ತದಾನದ ಅರಿವು ಮೂಡಿಸುವಲ್ಲಿ ಯುವ ರೆಡ್‌ಕ್ರಾಸ್ ಘಟಕದ ಕಾರ್ಯವು ಅತ್ಯಂತ ಮಹತ್ವದ್ದಾಗಿದೆ ಎಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಐಸಾಕ್ ರತ್ನಾಕರ್ ಅಭಿಪ್ರಾಯಪಟ್ಟರು.
ಸಂತ ಅನ್ನಮ್ಮ ಪದವಿ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ ಹಾಗೂ ಮೈಸೂರಿನ ಸಂತ ಜೋಸೆಫರ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನವು ಶ್ರೇಷ್ಠ ದಾನವಾಗಿದ್ದು, ಅದು ತನ್ನದೆ ಆದ ಮಹತ್ವವನ್ನು ಹೊಂದಿದೆ. ಕಾಲೇಜು ವಿದ್ಯಾರ್ಥಿಗಳು ರಕ್ತದಾನವನ್ನು ಮಾಡುವುದರಿಂದ ಸಮಾಜಕ್ಕೆ ಸೇವೆ ಸಲ್ಲಿಸಲು ಸದಾವಕಾಶ ದೊರಕಿ ದಂತಾಗುತ್ತದೆ ಎಂದು ಹೇಳಿದರು.
ಮೈಸೂರಿನ ಸಂತ ಜೋಸೆಫರ ಆಸ್ಪತ್ರೆಯ ರಕ್ತನಿಧಿ ಘಟಕದ ಮುಖ್ಯಸ್ಥ ಡಾ. ಮೊಹಮದ್ ಇಬ್ರಾಹಿಂ ಮಾತನಾಡಿ, ರಕ್ತದಾನದ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿ, ರಕ್ತದಾನವು ಒಂದು ಜೀವವನ್ನು ಉಳಿಸುವ ಶ್ರೇಷ್ಠ ಕೆಲಸವನ್ನು ಮಾಡುತ್ತದೆ. ಆದುದರಿಂದ ಯುವ ಜನತೆ ರಕ್ತದಾನದ ಮಹತ್ವವನ್ನು ಅರಿಯಬೇಕು. ರಕ್ತದಾನವು ಸರ್ವ ಶ್ರೇಷ್ಠ ದಾನವಾಗಿದೆ ಎಂದರು.
ಈ ಸಂದರ್ಭ ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜೋಮನ್ ಥೋಮಸ್, ಸಂತ ಜೋಸೆಫರ ಆಸ್ಪತ್ರೆಯ ವೈದ್ಯೆ ಡಾ. ಹೆಲೆನ್, ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕರಾದ ಹೇಮ, ದೃಶ್ಯ ಮತ್ತು ಕಾಲೇಜಿನ ಯುವ ರೆಡ್‌ಕ್ರಾಸ್ ಅಧಿಕಾರಿ, ಉಪನ್ಯಾಸಕ ಶಾಂತಿಭೂಷಣ್ ಹಾಜರಿದ್ದರು.
ಶಿಬಿರದಲ್ಲಿ ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆರೋಗ್ಯ ಪರೀಕ್ಷೆ ಮತ್ತು ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಿದರು. ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಸಹ ರಕ್ತದಾನವನ್ನು ಮಾಡಿದರು. ರಕ್ತದಾನವನ್ನು ಮಾಡಿದ ವಿದ್ಯಾರ್ಥಿಗಳಿಗೆ ಸಂತ ಜೋಸೆಫರ ಆಸ್ಪತ್ರೆ ವತಿಯಿಂದ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.