*ಗೋಣಿಕೊಪ್ಪ, ಡಿ. ೧೩: ವೀರಾಜಪೇಟೆ ಸೆಂಟ್ ಆನ್ಸ್ ಶಾಲೆಯ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಕಾರ್ಯಕ್ರಮದ ಅಂಗವಾಗಿ ತಾಲೂಕು ಅಕ್ಷರ ದಾಸೋಹ ಇಲಾಖೆಯ ವತಿಯಿಂದ ಆಯೋಜಿಸಿದ ಶಾಲೆಯ ಅಡುಗೆ ಸಿಬ್ಬಂದಿಗಳಿಗೆ ಅಡುಗೆ ಸ್ಪರ್ಧೆಯನ್ನು ಕಾರ್ಯಕ್ರಮ ನಡೆಸಲಾಯಿತು. ಹಲವು ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ರುಚಿಕರ ಊಟ ತಯಾರಿಸಿ ನೆರೆದವರಿಗೆ ಶುಚಿ ರುಚಿಯಾದ ಬೋಜನದ ಸವಿಯನ್ನು ಉಣಬಡಿಸಿದರು.

ಸ್ಪರ್ಧೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಿಗಿ ಅವರು ಚಾಲನೆ ನೀಡಿದರು. ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಅಡುಗೆ ಸಿಬ್ಬಂದಿಗಳ ಪಾತ್ರವು ಇದೆ. ಶುಚಿ ಮತ್ತು ರುಚಿಯಾದ ಅಡುಗೆ ತಯಾರಿಸಿದಾಗ ಮಕ್ಕಳು ಆಸಕ್ತಿಯಿಂದ ಅಡುಗೆಯನ್ನು ಸವಿಯುತ್ತಾರೆ. ಈ ನಿಟ್ಟಿನಲ್ಲಿ ಅಡುಗೆಯವರು ನಿತ್ಯವು ಹೊಸ ರುಚಿಯನ್ನು ಕಂಡುಕೊAಡು ಮಕ್ಕಳ ಮನಸ್ಸನ್ನು ಗೆಲ್ಲುತ್ತಿದ್ದಾರೆ ಎಂದು ಹೇಳಿದರು.

ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಶ್ ಕೆ.ಆರ್. ಪ್ರಸ್ತಾವಿಕ ನುಡಿಗಳಲ್ಲಿ ತಮ್ಮ ಮನೆಯ ಮಕ್ಕಳಂತೆ ಎಂಬ ಭಾವನೆಯೊಂದಿಗೆ ಶಾಲಾ ಮಕ್ಕಳಿಗೆ ನಿತ್ಯವೂ ಮಧ್ಯಾಹ್ನದ ಬೋಜನವನ್ನು ರುಚಿಯಾಗಿ ತಯಾರಿಸುವ ಅಡುಗೆ ಸಿಬ್ಬಂದಿಗಳ ಕಾರ್ಯ ಮಹತ್ವದಾಗಿದೆ ಎಂದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಅಡುಗೆ ಸಿಬ್ಬಂದಿಗಳಿಗೆ ಬಹುಮಾನ ಮತ್ತು ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. ತಾಲೂಕು ಶಿಕ್ಷಣ ಇಲಾಖೆಯ ಬಿಆರ್‌ಸಿ ವನಜಾಕ್ಷಿ, ಬಿಆರ್‌ಪಿ ಗೀತಾಂಜಲಿ, ಐಆರ್‌ಟಿ ಅಜಿತ್, ಸಿ.ಆರ್.ಪಿ ವೆಂಕಟೇಶ್, ಮುಖ್ಯ ಶಿಕ್ಷಕ ಬೆನ್ನಿ ಹಾಗೂ ಇಸಿಓ, ಅಡುಗೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.