ಕಣಿವೆ, ಡಿ. ೧೪: ಕುಶಾಲನಗರ ತಾಲೂಕಿನ ಹುಲುಸೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದೇಸಿ ಭತ್ತದ ಬೆಳೆ ಕ್ಷೇತ್ರೋತ್ಸವ ಸಾರ್ವಜನಿಕರು ಹಾಗೂ ಕೃಷಿಕರ ಗಮನ ಸೆಳೆಯಿತು.
ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಹಾಗೂ ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆ ವತಿಯಿಂದ ಜಂಟಿಯಾಗಿ ಆಯೋಜಿಸಿದ್ದ ಕೃಷಿ ಕ್ಷೇತ್ರೋತ್ಸವವನ್ನು ಕೊಡಗು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ. ಶಬಾನಾ ಎಂ. ಶೇಖ್ ದವಸಗಳಿಗೆ ಪುಷ್ಪಗಳನ್ನು ಹಾಕುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ರೈತರು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡುವ ಮೂಲಕ ಭೂಮಿಯ ಮಣ್ಣು ಹಾಗೂ ದೇಹದ ಆರೋಗ್ಯ ವೃದ್ಧಿಗೆ ಗಮನ ಕೊಡಬೇಕು. ರೈತರು ಸಂಘಟಿತರಾಗುವ ಮೂಲಕ ಕೃಷಿಯಲ್ಲಿ ನೂತನ ಆವಿಷ್ಕಾರಗಳನ್ನು ಕೈಗೊಳ್ಳಬೇಕು ಎಂದು ಕರೆಕೊಟ್ಟರು.
ಮುಖ್ಯ ಅತಿಥಿಯಾಗಿದ್ದ ಗೋಣಿ ಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ. ವೀರೇಂದ್ರ ಕುಮಾರ್ ಮಾತನಾಡಿ, ಕೃಷಿಕರು ಸಮಗ್ರ ಕೃಷಿ ಪದ್ಧತಿಗೆ ಒತ್ತು ನೀಡುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸ ಬಹುದಾಗಿದೆ. ಮನೆಯಂಗಳದಲ್ಲಿಯೇ ಸಾವಯವ ಗೊಬ್ಬರವನ್ನು ತಯಾರಿಸಿ ಕೊಳ್ಳುವ ಮೂಲಕ ರಾಸಾಯನಿಕ ಗಳನ್ನು ಮಿತವಾಗಿ ಬಳಸಿ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಹೇಳಿದರು. ಸಕಲೇಶಪುರ ತಾಲೂಕಿನ ಎಡೆಹಳ್ಳಿಯ ಪ್ರಗತಿಪರ ಕೃಷಿಕ ವೈ.ಸಿ. ರುದ್ರಪ್ಪ ಮಾತನಾಡಿ, ಪಾರಂಪರಿಕ ಕೃಷಿ ಪದ್ಧತಿಯಲ್ಲಿ ಜನರು ಆರೋಗ್ಯವಾಗಿದ್ದರು. ಹಿಂದಿನ ಕಾಲದ ಆಹಾರ ಪದ್ಧತಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿತ್ತು. ಇತ್ತೀಚಿನ ಆಧುನಿಕ ಕೃಷಿ ಪದ್ಧತಿಯಲ್ಲಿ ಕೃಷಿಕರು ದಿಢೀರನೆ ಹಣ ಮಾಡುವ ದುರುದ್ದೇಶದಿಂದ ಕೈಗೊಳ್ಳುವ ಬೆಳೆಗಳಿಗೆ ಮನಬಂದAತೆ ರಾಸಾಯನಿಕಗಳನ್ನು ಸುರಿದು ಬೆಳೆವ ಧಾನ್ಯಗಳು ರೋಗಗಳ ಗೂಡುಗಳಾಗಿವೆ ಎಂದರು.
ಸಾಹಿತಿ ಭಾರಧ್ವಾಜ್ ಕಣಿವೆ ಮಾತನಾಡಿ, ಹಿಂದಿನ ಕಾಲದಲ್ಲಿ ಗುಣಮಟ್ಟದ ಆಹಾರ ಪದ್ಧತಿ ಯೊಂದಿಗೆ ಮಹಿಳೆಯರು ಕೂಡ ಹೆಚ್ಚಾಗಿ ಶ್ರಮಿಕರಾಗಿದ್ದ ಕಾರಣ ರೋಗಮುಕ್ತ ಬದುಕು ಅಂದಿನ ಜನರದಾಗಿತ್ತು. ಆದ್ದರಿಂದ ಇಂದು ಕೂಡ ಸಾವಯವ ಕೃಷಿ ಕೈಗೊಳ್ಳುವ ಮೂಲಕ ಜನರು ಆರೋಗ್ಯವಂತ ರಾಗಬಹುದು ಎಂದರು.
ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಬಳ್ಳೇಕೆರೆ ಜಯಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ಅಧಿಕಾರಿ ಡಾ. ಆರ್.ಕೆ. ಯಾದವ್ ಬಾಬು, ನಿವೃತ್ತ ಕೃಷಿ ಅಧಿಕಾರಿ ಹೆಚ್.ಎಸ್. ರಾಜಶೇಖರ್, ಮಂಡ್ಯ ಜಿಲ್ಲೆಯ ಶಿವಳ್ಳಿ ಗ್ರಾಮದ ಸಿದ್ಧ ಸಣ್ಣ ಭತ್ತದ ತಳಿಯ ಪೋಷಕರಾದ ಬೋರೇಗೌಡ, ಮೂದ್ರವಳ್ಳಿಯ ಕಾವೇರಿ ಮಾತಾ ಸಾವಯವ ಕೃಷಿ ಸಂಘದ ಅಧ್ಯಕ್ಷ ಎಂ.ಕೆ. ಮುತ್ತಪ್ಪ, ಹುಲುಸೆ ಗ್ರಾಮದ ಪ್ರಗತಿಪರ ಕೃಷಿಕರಾದ ಸದಾಶಿವ, ಹೆಚ್.ಸಿ. ಶಿವರುದ್ರಪ್ಪ, ಭೂಮಿ ಸುಸ್ಥಿರ ಸಂಸ್ಥೆಯ ಪುಟ್ಟಸ್ವಾಮಿ, ಲೋಕೇಶ್ ಮೊದಲಾದವರಿದ್ದರು.
ಇದೇ ಸಂದರ್ಭ ಕೃಷಿಕರು ಕೃಷಿ ಚಟುವಟಿಕೆಗಳಿಗೆ ಬಳಸುವ ನೇಗಿಲು, ನೊಗ, ಮರ, ಸೇರು, ಕೊಳಾಯಿ, ಬೀಸುವ ಕಲ್ಲು, ಅರೆಯುವ ಕಲ್ಲು ಮೊದಲಾದ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಹಾಗೆಯೇ ಹುಲುಸೆ ಗ್ರಾಮದ ಹೇಮಂತಕುಮಾರ್ ಎಂಬ ಕೃಷಿಕ ಸಾಕಿರುವ ಎತ್ತುಗಳು ಗಮನ ಸೆಳೆದವು. ಕಾರ್ಯಕ್ರಮದ ಬಳಿಕ ದೇಸಿ ಭತ್ತದ ಅಕ್ಕಿಯಿಂದ ಸಿದ್ದಪಡಿಸಿದ ಉಪಹಾರದ ವ್ಯವಸ್ಥೆ ಕಲ್ಪಿಸಿ ಗ್ರಾಮದ ಕೃಷಿಕ ಮಹಿಳೆಯರೇ ಬಡಿಸಿದ್ದು ವಿಶೇಷವಾಗಿತ್ತು.