ಗಡಿಯಲ್ಲಿ ಯಥಾಸ್ಥಿತಿ ಬದಲಿಸಲು ಯತ್ನ: ಸಚಿವ

ನವದೆಹಲಿ, ಡಿ. ೧೩: ಭಾರತೀಯ ಸೇನೆ ಹಾಗೂ ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿಯ ಸಂಘರ್ಷದ ಮೂಲಕ ಭಾರತ-ಚೀನಾ ನಡುವಿನ ಗಡಿ ವಿವಾದ ಮತ್ತೆ ಸದ್ದು ಮಾಡಿದೆ. ಎಲ್‌ಎಸಿಯಲ್ಲಿ ಉಭಯ ದೇಶಗಳ ಸಿಬ್ಬಂದಿಗಳ ನಡುವೆ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಘರ್ಷಣೆ ಉಂಟಾಗಿದ್ದು, ೬ ಮಂದಿ ಭಾರತೀಯ ಯೋಧರಿಗೆ ಗಾಯಗಳಾಗಿವೆ ಎಂದು ಭಾರತೀಯ ಸೇನೆ ಸೋಮವಾರ ಬಹಿರಂಗಪಡಿಸಿತ್ತು. ತಾ. ೯ ರಂದು ಚೀನಾ ಸೇನಾ ಸಿಬ್ಬಂದಿಗಳು ಎಲ್‌ಎಸಿ ಬಳಿ ಮುಖಾಮುಖಿ ಯಾಗಿದ್ದು, ಭಾರತೀಯ ಪಡೆಗಳು ಈ ನಡೆಯನ್ನು ತೀವ್ರವಾಗಿ ಖಂಡಿಸಿತ್ತು. ವರದಿಯ ಪ್ರಕಾರ, ೩೦೦ ಮಂದಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಸಿಬ್ಬಂದಿಗಳು ಅಲ್ಲಿದ್ದು, ಬೃಹತ್ ಪ್ರಮಾಣದಲ್ಲಿ ಚೀನಾದ ಸಿಬ್ಬಂದಿಗಳಿಗೆ ಗಾಯಗಳಾಗಿವೆ. ೨೦೨೦ ರಲ್ಲಿ ಸಂಭವಿಸಿದ್ದ ಗಲ್ವಾನ್ ಘರ್ಷಣೆಯ ನಂತರ ಚೀನಾ- ಭಾರತದ ನಡುವೆ ಈ ಹೊಸ ಘರ್ಷಣೆ ಉಂಟಾಗಿದೆ. ಚೀನಾ ಹಾಗೂ ಭಾರತ ೧೯೬೨ ರಲ್ಲಿ ಪೂರ್ಣ ಪ್ರಮಾಣದ ಯುದ್ಧ ನಡೆಸಿದ್ದವು, ಅರುಣಾಚಲ ಪ್ರದೇಶದ ಮೇಲಿನ ಹಕ್ಕು ಸ್ಥಾಪನೆಯ ವಿಷಯವಾಗಿ ಈ ಯುದ್ಧ ನಡೆದಾಗಿನಿಂದಲೂ ಚೀನಾ ಅರುಣಾಚಲ ಪ್ರದೇಶವನ್ನು ತನ್ನದೆಂದು ಹಕ್ಕು ಪ್ರತಿಪಾದನೆ ಮಾಡುತ್ತಿದ್ದು, ಅದನ್ನು ಟಿಬೆಟ್‌ನ ಭಾಗ ಎಂದು ಹೇಳುತ್ತಿದೆ. ಭಾರತ ಚೀನಾದ ವಿರುದ್ಧ ಗಡಿ ಪ್ರದೇಶದಲ್ಲಿ ಏಕಪಕ್ಷೀಯವಾಗಿ ಯಥಾಸ್ಥಿತಿ ಯನ್ನು ಬದಲಿಸುತ್ತಿದೆ ಎಂದು ಆರೋಪಿಸಿದೆ. ತಾ. ೯ ರಂದು, ಚೀನಾದ ಗಡಿ ವಾಸ್ತವ ರೇಖೆಯಲ್ಲಿ ಚೀನಾದ ಸೇನಾಪಡೆ ಯೋಧರು ಯಾಂಗ್ಟ್ಸೆ, ತವಾಂಗ್ ಸೆಕ್ಟರ್‌ನಲ್ಲಿ ಆಕ್ರಮಣ ಮಾಡಿಕೊಂಡು ಒಳನುಸುಳಿದರು. ಅಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿತು. ಇದನ್ನು ನಮ್ಮ ಪಡೆಗಳು ದೃಢವಾದ ರೀತಿಯಲ್ಲಿ ನಿಭಾಯಿಸಿದರು ಎಂದು ಸದನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಭಾರತ-ಅಮೇರಿಕಾ ಜಂಟಿ ಸಮರಾಭ್ಯಾಸದ ಬೆನ್ನಲ್ಲೇ ಗಡಿಯಲ್ಲಿ ಚೀನಾ ಹೊಸದಾಗಿ ಘರ್ಷಣೆಗೆ ಮುಂದಾಗಿದ್ದು, ಎರಡೂ ದೇಶಗಳ ಸೈನಿಕರಿಗೆ ಗಾಯಗಳಾಗಿವೆ ಎಂದು ರಾಜನಾಥ್ ಸಿಂಗ್ ಸದನಕ್ಕೆ ಮಾಹಿತಿ ನೀಡಿದ್ದಾರೆ. ಕಳೆದ ವಾರ ಅರುಣಾಚಲ ಗಡಿಯ ಯಾಂಗ್ಟ್ಸೆ ಪ್ರದೇಶದಲ್ಲಿ ಭಾರತ - ಚೀನಾ ಸೇನಿಕರ ನಡುವೆ ಘರ್ಷಣೆ ನಡೆದಿದೆ ಎಂದು ವರದಿಯಾದ ನಂತರ ಭಾರತದೊಂದಿಗಿನ ತನ್ನ ಗಡಿಯಲ್ಲಿ ಪರಿಸ್ಥಿತಿ "ಸ್ಥಿರವಾಗಿದೆ" ಎಂದು ಚೀನಾ ಹೇಳಿದೆ. ಆದರೆ ಅಲ್ಲಿ ಘರ್ಷಣೆ ನಡೆದಿದೆಯೇ? ಅಥವಾ ಇಲ್ಲವೇ? ನಡೆದಿದ್ದರೆ ಚೀನಾದ ಸೈನಿಕರಿಗೆ ಗಾಯಗಳಾಗಿರುವುದು ನಿಜವೇ ಎಂಬುದರ ಬಗ್ಗೆ ಚೀನಾ ಬಹಿರಂಗಪಡಿಸಿಲ್ಲ.

ಪ್ರಧಾನಿ ಮೋದಿ, ಹೆಚ್.ಡಿ. ದೇವೇಗೌಡ ಭೇಟಿ

ನವದೆಹಲಿ, ಡಿ. ೧೩: ಅಂತರ್ ರಾಜ್ಯ ನದಿ ನೀರಿನ ಹಂಚಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ಕಾವೇರಿ, ಕೃಷ್ಣ, ಮಹದಾಯಿ ಅಂತರ್ ರಾಜ್ಯ ನದಿ ನೀರಿನ ಹಂಚಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮಾತುಕತೆ ನಡೆಸಲಾಗಿದೆ ಎಂದರು. ಹಾಸನ ವಿಮಾನ ನಿಲ್ದಾಣ ಯೋಜನೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಕುಂಚಿಟಿಗ ಒಕ್ಕಲಿಗ ಸಮುದಾಯವನ್ನು ಒಬಿಸಿ ಪಟ್ಟಿಯಲ್ಲಿ ಸೇರಿಸುವಂತೆಯೂ ಪ್ರಧಾನಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ತಾವು ಪ್ರಸ್ತಾಪಿಸಿರುವ ಎಲ್ಲಾ ವಿಷಯಗಳನ್ನು ಪ್ರಧಾನಿ ಗಂಭೀರವಾಗಿ ಪರಿಗಣಿಸಿದ್ದಾರೆ. ಎಲ್ಲಾ ದಾಖಲೆಗಳನ್ನು ಅವರು ಪರಿಶೀಲಿಸಿದ್ದು, ಖಂಡಿತವಾಗಿಯೂ ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ದೇವೇಗೌಡ ಮಾಹಿತಿ ನೀಡಿದರು.

ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ

ಚಿತ್ರದುರ್ಗ, ಡಿ. ೧೩: ಕೊನೆಗೂ ರಾಜ್ಯ ಸರ್ಕಾರ ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್. ವಸ್ತçದ್ ಅವರನ್ನ ಮುರುಘಾಮಠದ ಆಡಳಿತಾಧಿಕಾರಿ ನೇಮಕ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ. ಪಿ.ಎಸ್. ವಸ್ತçದ್ ಅವರನ್ನು ಮುರುಘಾಮಠದ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿ ಟಿ.ಸಿ. ಕಾಂತರಾಜ್ ಅವರು ಇಂದು ಆದೇಶ ಹೊರಡಿಸಿದ್ದಾರೆ. ಮಠದ ಲೆಕ್ಕಪತ್ರ ನಿರ್ವಹಣೆ, ಮಠದ ಚರ ಸ್ಥಿರಾಸ್ತಿ ಹಿತದೃಷ್ಟಿಯಿಂದ ಆಡಳಿತಾಧಿಕಾರಿ ನೇಮಿಸಲಾಗಿದೆ. ವಸ್ತçದ್ ಅವರು ಮುರುಘಾಮಠದ ಟ್ರಸ್ಟ್ ಮತ್ತು ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಿವಮೂರ್ತಿ ಮುರುಘಾ ಶರಣರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದ್ದು, ಅವರು ನ್ಯಾಯಾಂಗ ಬಂಧನದಲ್ಲಿರುವ ಹಿನ್ನೆಲೆಯಲ್ಲಿ ಟ್ರಸ್ಟ್ ಮತ್ತು ಶಿಕ್ಷಣ ಸಂಸ್ಥೆಗಳ ನಿರ್ವಹಣೆಗೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ಭಕ್ತರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು.

ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಚಂಡಮಾರುತ

ನವದೆಹಲಿ, ಡಿ. ೧೩: ತಮಿಳುನಾಡಿನಲ್ಲಿ ಮಾಂಡೌಸ್ ಚಂಡಮಾರುತ ಕ್ಷೀಣಿಸಿದ ಬೆನ್ನಲ್ಲೇ ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಚಂಡ ಮಾರುತ ಎದುರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಾ. ೧೩ ರಂದು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಚಂಡಮಾರುತದ ಪರಿಸ್ಥಿತಿ ಉಂಟಾಗುತ್ತಿದೆ. ಈ ಚಂಡಮಾರುತ ಪಶ್ಚಿಮ-ವಾಯುವ್ಯಕ್ಕೆ ಚಲಿಸಿ ಅಲ್ಲಿಂದ ಭಾರತೀಯ ಕರಾವಳಿಯಿಂದ ಮುಂದಕ್ಕೆ ಹೋಗುತ್ತದೆ. ಇದರ ಪರಿಣಾಮವಾಗಿ ಅಂಡಮಾನ್ ಹಾಗೂ ನಿಕೋಬಾರ್‌ನಲ್ಲಿ ತಾ. ೧೪ ಹಾಗೂ ೧೫ ರಂದು ಬೃಹತ್ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವಿಶ್ಲೇಷಿಸಿದೆ. ಮೀನುಗಾರರು ಸಮುದ್ರ ಕ್ಕಿಳಿಯದಂತೆ ಸೂಚನೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ತೇಜಸ್ವಿ ಯಾದವ್‌ಗೆ ಅಧಿಕಾರ ಹಸ್ತಾಂತರಿಸುವ ಸುಳಿವು

ಪಾಟ್ನಾ, ಡಿ. ೧೩: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಯುವ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಅಧಿಕಾರ ಹಸ್ತಾಂತರಿಸಲು ಎದುರು ನೋಡುತ್ತಿರುವ ಬಗ್ಗೆ ಮತ್ತಷ್ಟು ಸುಳಿವು ನೀಡಿದ್ದಾರೆ ಎಂದು ಆಡಳಿತಾರೂಢ 'ಮಹಾಘಟಬಂಧನ್' ಶಾಸಕರ ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ತಿಳಿಸಿದ್ದಾರೆ. ೨೦೨೪ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವನ್ನು "ಪ್ರತಿಪಕ್ಷಗಳ ಒಕ್ಕೂಟ" ಸೋಲಿಸಬಹುದು ಎಂದಿರುವ ಜೆಡಿಯು ಮುಖ್ಯಸ್ಥ, ಮುಂದಿನ ಲೋಕಸಭೆ ಚುನಾವಣೆಗೆ ತಾವು ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ತೇಜಸ್ವಿ ಯಾದವ್ ಅವರು ೨೦೨೫ ರ ಬಿಹಾರ ಚುನಾವಣೆಯಲ್ಲಿ ಆಡಳಿತರೂಢ ಮೈತ್ರಿಕೂಟವನ್ನು ಮುನ್ನಡೆಸಲಿದ್ದಾರೆ ಎಂದು ನಿತೀಶ್ ಕುಮಾರ್ ಘೋಷಿಸಿದ್ದಾರೆ. ಅಲ್ಲದೆ ತೇಜಸ್ವಿ ಅವರನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದ್ದಾರೆ. "ನಾನು ಪ್ರಧಾನಿ ಅಭ್ಯರ್ಥಿ ಅಥವಾ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ. ಬಿಜೆಪಿಯನ್ನು ಸೋಲಿಸುವುದೇ ನನ್ನ ಗುರಿ" ಎಂದು ಬಿಹಾರದ ಆಡಳಿತರೂಢ 'ಮಹಾಘಟಬಂಧನ್' ಶಾಸಕರ ಸಭೆಯಲ್ಲಿ ನಿತೀಶ್ ಕುಮಾರ್ ಹೇಳಿದ್ದಾರೆ.

ರಾಜ್ಯದ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣೆ

ಹನೂರು, ಡಿ. ೧೩: ರಾಜ್ಯದ ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ನೇತ್ರ ತಪಾಸಣೆ, ಕನ್ನಡಕ ವಿತರಣೆ ಕಾರ್ಯಕ್ರಮಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹನೂರು ಮತ್ತು ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಸಿಎಂ, ಸರ್ಕಾರ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಕರ್ನಾಟಕ ರಾಜ್ಯ ರಚನೆಯಾದ ನಂತರ ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ೮,೦೦೦ ಶಾಲಾ ಕೊಠಡಿಗಳನ್ನು ನಿರ್ಮಿಸುತ್ತಿದ್ದೇವೆ. ರಾಜ್ಯದ ೧೦೦ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುತ್ತಿದ್ದೇವೆ ಎಂದು ತಿಳಿಸಿದರು. ಚಾಮರಾಜನಗರ ಜಿಲ್ಲೆ ಕೆರೆಗಳ ಜಿಲ್ಲೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲೆಯ ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ, ಯಳಂದೂರು ತಾಲೂಕಿನ ಎಲ್ಲಾ ಕೆರೆ ತುಂಬಿಸುವ ಕಾರ್ಯವನ್ನು ಮೊಟ್ಟಮೊದಲ ಬಾರಿಗೆ ಮಾಡಲಾಯಿತು ಎಂದು ಅವರು ತಿಳಿಸಿದರು.