ಸೋಮವಾರಪೇಟೆ, ಡಿ. 12: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ, ಎಡದಂಟೆ ಗ್ರಾಮ ವ್ಯಾಪ್ತಿಯಲ್ಲಿ ವನ್ಯ ಪ್ರಾಣಿಗಳ ಹಾವಳಿ ಮಿತಿಮೀರಿದ್ದು, ಕೃಷಿ ಫಸಲು ನಷ್ಟಪಡಿಸುತ್ತಿವೆ.
ಈ ಗ್ರಾಮಗಳಲ್ಲಿ ಕೈಗೊಂಡಿರುವ ಕೃಷಿ ಪ್ರದೇಶಕ್ಕೆ ಲಗ್ಗೆಯಿಡುತ್ತಿರುವ ಕಾಡು ಹಂದಿ, ಕಾಟಿ ಸೇರಿದಂತೆ ಇನ್ನಿತರ ವನ್ಯಪ್ರಾಣಿಗಳು ಕೃಷಿ ಫಸಲನ್ನು ತಿಂದು, ತುಳಿದು ನಷ್ಟ ಉಂಟುಮಾಡುತ್ತಿವೆ. ಕೂತಿ ಗ್ರಾಮದ ಕೆ.ಆರ್. ಗಣಪತಿ, ಕೆ.ಕೆ. ಲಕ್ಷ್ಮೀಕಾಂತ್, ಯು.ಸಿ. ಧರ್ಮಪಾಲ, ಕೆ.ಡಿ. ಗಿರೀಶ್, ಎಡದಂಟೆ ಗ್ರಾಮದ ಉದಯ್, ಕೃಷ್ಣ ಸೇರಿದಂತೆ ಇತರರ ಗದ್ದೆಗಳಿಗೆ ಲಗ್ಗೆಯಿಟ್ಟಿರುವ ಪ್ರಾಣಿಗಳು ಕೊಯ್ಲಿಗೆ ಬಂದಿರುವ ಭತ್ತದ ಫಸಲನ್ನು ನಷ್ಟಗೊಳಿಸಿವೆ.
ಈ ಭಾಗದಲ್ಲಿ ವನ್ಯಪ್ರಾಣಿಗಳ ಹಾವಳಿಯಿಂದ ನಿರಂತರವಾಗಿ ಕೃಷಿ ಫಸಲು ನಷ್ಟವಾಗುತ್ತಿದೆ. ವನ್ಯಪ್ರಾಣಿಗಳ ಹಾವಳಿಗೆ ತಡೆಯೊಡ್ಡುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನ ಶೂನ್ಯವಾಗಿದೆ. ವರ್ಷವಿಡೀ ಬೆವರು ಹರಿಸಿ ವ್ಯವಸಾಯ ಮಾಡಿದ್ದು, ಇದೀಗ ಫಸಲು ಕೈಸೇರುವ ಸಮಯದಲ್ಲಿ ವನ್ಯಪ್ರಾಣಿಗಳು ಹಾಳು ಮಾಡುತ್ತಿವೆ. ಕಷ್ಟಪಟ್ಟು ಕೈಗೊಂಡ ಭತ್ತದ ಕೃಷಿ ಇದೀಗ ಬಾಯಿಗಿಲ್ಲದ ತುತ್ತಾಗಿದೆ. ಇನ್ನಾದರೂ ಅರಣ್ಯ ಇಲಾಖೆ ತುರ್ತಾಗಿ ಕೃಷಿ ಬೆಳೆಗಳಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ.
ಈ ಭಾಗದಲ್ಲಿ ಬೀಡುಬಿಟ್ಟಿರುವ ಹತ್ತಕ್ಕೂ ಅಧಿಕ ಕಾಟಿಗಳು, ಕಾಡುಹಂದಿಗಳು ಕೃಷಿ ಪ್ರದೇಶಕ್ಕೆ ನಿರಂತರವಾಗಿ ಧಾಳಿ ನಡೆಸುತ್ತಿವೆ. ಭತ್ತ, ತರಕಾರಿ ಬೆಳೆಗಳು ನಷ್ಟವಾಗುತ್ತಿವೆ. ಗರಿಷ್ಠ ಪರಿಹಾರ ಒದಗಿಸಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.