‘‘ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ..
ಜಲವೆ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನೇನಾದರೂ ಬಲ್ಲಿರಾ
ಜಲದೋಕುಳಿಯಂತೆ ಸ್ಥಿರವಲ್ಲ ಈ ದೇಹ
ನೆಲೆಯ ಅರಿತು ನೀ ನೆನೆಕಂಡ್ಯಾ ಮನುಜ’’...
ಎಂಬ ವಾಣಿಯ ಮೂಲಕ ಇಡೀ ಮನುಕುಲವನ್ನು ಜಾತಿ, ಮತಗಳ ಅಜ್ಞಾನ ಅಂಧಕಾರದಿಂದ ಹೊರ ತರಲು ಶ್ರಮಿಸಿದ ಸಂತ ಮಹಾಪುರುಷನೆ ತಿಮ್ಮಪ್ಪ ನಾಯ್ಕ. ಕ್ರಿ,ಶ 16ನೇ ಶತಮಾನದ ಆ ಸಂತ ಶ್ರೇಷ್ಠ ಹುಟ್ಟಿದ್ದು ಹಾವೇರಿ ಜಿಲ್ಲೆಯ ಬಾಡ ಎಂಬ ಗ್ರಾಮದಲ್ಲಿ. ತಂದೆ ಬೀರಪ್ಪ, ತಾಯಿ ಬಚ್ಚಮ್ಮ, ಮಡದಿ ಮುಕುತಿ. ಬೀರಪ್ಪ ಸಮಾಜದ ಪ್ರಮುಖನಾಗಿದ್ದು, ಸಮುದಾಯದಲ್ಲಿ ಬಹಳ ಹೆಸರು ಮತ್ತು ಉತ್ತಮ ಸ್ಥಾನಮಾನಗಳಿದ್ದವು. ಆದರೆ ಆತನ ಪತ್ನಿ ಬಚ್ಚಮ್ಮಳಿಗೆ ಮಕ್ಕಳಾಗಲಿಲ್ಲವೆಂಬ ಒಂದೇ ಕೊರಗು ಸದಾ ಕಾಡುತ್ತಿತ್ತು. ಹೀಗಾಗಿ ತಮ್ಮ ಇಷ್ಟಾರ್ಥ ದೈವ ತಿರುಪತಿ ತಿಮ್ಮಪ್ಪನಿಗೆ ಪುತ್ರ ಸಂತಾನವನ್ನು ಕರುಣಿಸುವಂತೆ ಹಾಗೂ ಒಂದು ವೇಳೆ ಮಗುವಾದರೆ ಆ ಮಗುವನ್ನು ನಿನ್ನ ದಾಸನನ್ನಾಗಿ ಮಾಡುತ್ತೇನೆಂದು ಹರಕೆ ಹೊತ್ತು ಕೊಂಡಿದ್ದಳು ಆ ಮಹಾಮಾತೆ. ಹೀಗೆ ಆಕೆ ತಿರುಪತಿ ತಿಮ್ಮಪ್ಪನ ಬಳಿ ತನ್ನ ಬೇಡಿಕೆಯನ್ನು ಇಟ್ಟ ಕೆಲವೇ ದಿನಗಳಲ್ಲಿ ಆ ಹರಕೆಯ ಫಲವೆಂಬಂತೆ ಕ್ರಿ,ಶ 1509ನೇ ಇಸವಿಯಲ್ಲಿ ದಂಪತಿಗೆ ಗಂಡು ಮಗುವಿನ ಜನನವಾಯಿತು. ಇನ್ನೂ ವಿಶೇಷವೆಂದರೆ ಅದೇ ಸಂದರ್ಭದಲ್ಲಿ ವಿಜಯನಗರ ಸಾಮ್ರಾಜ್ಯ ಸಿಂಹಾಸನದ ಮೇಲೆ ‘ಶ್ರೀ ಕೃಷ್ಣ ದೇವರಾಯ’ ಪಟ್ಟಾಭಿಷಿಕ್ತನಾದನು. ಒಂದು ಕಡೆ ಧರ್ಮೋದ್ದಾರಕನ ಆಡಳಿತ ಶುರುವಾದರೆ ಮತ್ತೊಂದೆಡೆ ಮಹಾನ್ ಸಂತನ ಜನನವಾಗಿತ್ತು. ಅಂದು ತಿಮ್ಮಪ್ಪನ ಕೃಪೆಯಿಂದ ಹುಟ್ಟಿದ ಶಿಶುವಿಗೆ ಮುಂದೆ ‘ತಿಮ್ಮಪ್ಪ ನಾಯಕ’ನೆಂದು ನಾಮಕರಣ ಮಾಡಲಾಯಿತು. ಬೀರಪ್ಪನಿಗೆ ಮಗನನ್ನು ತನ್ನಂತೆ ಪರಾಕ್ರಮಿ ಮಾಡಬೇಕೆಂಬ ಇಚ್ಚೆ ಆತನದಾಗಿತ್ತು. ಆದರೆ ತಾಯಿ ಬಚ್ಚಮ್ಮಳಿಗೆ ಮಾತ್ರ ಮಗನಿಗೆ ಶಸ್ತ್ರ, ಶಾಸ್ತ್ರಾಭ್ಯಾಸದ ಜೊತೆಜೊತೆಗೆ ಸಂಗೀತ, ಸಾಹಿತ್ಯ ತತ್ವಜ್ಞಾನ, ವ್ಯಾಕರಣ, ಛಂದಸ್ಸು, ಉಪನಿಷತ್ತುಗಳ ನಡುನಡುವೆ ವೇದಸಾರಧ್ಯಯನ, ಕತ್ತಿವರಸೆ, ಕೋಲುವರಸೆ ಕಲಿಸಬೇಕೆಂಬ ಆಸೆ. ಹೀಗೆ ಮಗು ಸಕಲ ಶಸ್ತ್ರ, ಶಾಸ್ತ್ರವಿದ್ಯೆ ವನೆಲ್ಲಾ ಕಲಿತುಕೊಂಡನು. ಹೀಗಿರುವಾಗಲೇ ಅದೊಂದು ದಿನ ತಂದೆ ಬೀರಪ್ಪ ಅಕಾಲ ಮೃತ್ಯುವಿಗೆ ತುತ್ತಾದನು ತದನಂತರ ಬಚ್ಚಮ್ಮನಿಗೆ ದಿಕ್ಕುತೋಚಲಿಲ್ಲ ಬೀರಪ್ಪನ ನಂತರ ಅವನ ಮಗ ತಿಮ್ಮಪ್ಪ ಎಳೆ ವಯಸ್ಸಿನಲ್ಲಿ ಅಧಿಕಾರ ವಹಿಸಿ ಕೊಂಡನು. ಹೀಗೆ ನಾಯಕನಾದ ತಿಮ್ಮಪ್ಪನಿಗೆ ಅದೊಂದು ದಿನ ಕನಸಿನಲ್ಲಿ ತಿರುಪತಿ ತಿಮ್ಮಪ್ಪ ಪ್ರತ್ಯಕ್ಷನಾಗಿ ತನಗೊಂದು ಗುಡಿ ಕಟ್ಟಿಸಿ ಕೊಡು ಎಂದು ಕೇಳಿದನೆಂದೂ, ತನಗೆ ಬಿದ್ದ ಕನಸ್ಸಿನ ಬಗ್ಗೆ ಅಚ್ಚರಿಗೊಂಡ ತಿಮ್ಮಪ್ಪ ನಾಯಕ ಮುಂದೆ ದೇವರ ಅಣತಿಯಂತೆ ದೇವಾಲಯವೊಂದನ್ನು ಕಟ್ಟುವುದಕ್ಕೆ ಮುಂದಾದನು. ದೇವಾಲಯ ಕಟ್ಟಿಸುವ ಕಾರ್ಯಭರದಿಂದ ಸಾಗುತ್ತಿತ್ತು. ಅಡಿಪಾಯ ಹಾಕಲು ಭೂಮಿಯನ್ನು ಅಗೆಯುವ ಘಳಿಗೆಯಲ್ಲಿ ಏಳು ಗಡಿಗೆಗಳಷ್ಟು ಚಿನ್ನದ ನಾಣ್ಯಗಳು ಹಾಗೂ ಒಂದು ದೇವರ ವಿಗ್ರಹ ಕೂಡ ಸಿಕ್ಕಿತು. ಮೂರ್ತಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಿದ ತಿಮ್ಮಪ್ಪ ಮುಂದೆ ಸಿಕ್ಕಿದ ಧನಕನಕಗಳನ್ನು ಜನರ ಶ್ರೇಯಸ್ಸು ಹಾಗೂ ಧಾರ್ಮಿಕ ಕಾರ್ಯಗಳಿಗಾಗಿಯೆ ವ್ಯೆಯಿಸಿದನು. ಭೂಮಿಯಲ್ಲಿ ಕನಕ ಸಿಕ್ಕಿದ ಕಾರಣ ಈತ ಮುಂದೆ ‘ಕನಕನಾಯಕ' ಎಂದು ಪ್ರಸಿದ್ಧಿಯನ್ನು ಪಡೆದನು. ಹೀಗೆ ತಿಮ್ಮಪ್ಪನಿಗೆ ‘ಕನಕ' (ಚಿನ್ನ) ಎನ್ನುವ ಹೆಸರು ಬಂದಿತು. ಹೀಗಿರುವ ಸಮಯ ದಲ್ಲೇ ಬಾಡ ಗ್ರಾಮದ ಮೇಲೆ ಶತ್ರುಪಡೆ ದಂಡೆತ್ತಿ ಬಂದಿತು. ಆ ಯುದ್ದದಲ್ಲಿ ಪರಾಕ್ರಮಿ ಕನಕನಾಯಕ ಗಂಭೀರವಾಗಿ ಗಾಯಗೊಂಡನು ಇನ್ನೇನು ಬದುಕುವುದು ಕಷ್ಟ ಎಂಬ ಪರಿಸ್ಥಿತಿಯಲ್ಲಿರುವಾಗ ಅಲ್ಲಿ ಪವಾಡ ವೊಂದು ನಡೆಯಿತು. ತಿರುಪತಿಯ ತಿಮ್ಮಪ್ಪ ಈ ಬಾಡದ ತಿಮಪ್ಪನಾಯಕನಿಗೆ ಪ್ರತ್ಯಕ್ಷನಾಗಿ ತಾಯಿ ಬಚ್ಚಮ್ಮ ಹೊತ್ತ ಹರಕೆಯ ಬಗ್ಗೆ ಕನಕನಾಯಕನಿಗೆ ನೆನಪಿಸಿತು. ಮುಂದೆ ಕನಸ್ಸಲ್ಲಿ ಕಂಡ ವೆಂಕಟರಮಣನಿಗೆ ನಿನ್ನ ದಾಸನಾಗುವೆನೆಂದು ಹೇಳಿದ ಮೇಲೆ ಕನಕನಾಯಕ ಬಹುಬೇಗ ಚೇತರಿಸಿಕೊಂಡನು. ಕನಕನಾಯಕನು ಭಕ್ತಿಯ ಪಥದಲ್ಲಿ ಮೋಕ್ಷದ ಹಾದಿಯನ್ನು ಕಂಡುಕೊಳ್ಳುವುದರ ಹರಿವಾಗಿ ಕನಕರು ಮನೆಯನ್ನು ತೊರೆದು ಗುರುವನ್ನು ಹರಸಿ ಹೊರಟನು. ಹೀಗೆ ನೇರವಾಗಿ ಬಂದು ನಿಂತದ್ದು ವಿಜಯನಗರದಲ್ಲಿ ಮತ್ತು ಅಲ್ಲಿ ಕನಕರಿಗೆ ದರ್ಶನವಾಗಿದ್ದು ವ್ಯಾಸತೀರ್ಥರು. ತತ್ವಶಾಸ್ತ್ರದಲ್ಲಿ ನಿಸ್ಸೀಮರಾಗಿದ್ದ ವ್ಯಾಸತೀರ್ಥರು ವೇದಶಾಸ್ತ್ರೋಪನಿಷತ್ತುಗಳನ್ನು ಕರಗತ ಮಾಡಿಕೊಂಡಿದ್ದಂತಹ ಯತಿವರಣ್ಯರಾಗಿದ್ದರು. ಆದರೆ ಕನಕನನ್ನು ಶಿಷ್ಯರನ್ನಾಗಿ ಸ್ವೀಕರಿಸಲು ವ್ಯಾಸತೀರ್ಥರಿಗೆ ಸಾಕಷ್ಟು ವಿರೋಧಗಳು ಎದುರಾದವು. ಆದರೆ ಅವುಗಳೆಲ್ಲವನ್ನು ಮೀರಿ ವ್ಯಾಸತೀರ್ಥರು ಕನಕರಿಗೆ ದೀಕ್ಷೆ ಕೊಟ್ಟರು. ಮುಂದೆ ವ್ಯಾಸತೀರ್ಥರ ಮಾರ್ಗದರ್ಶನದಲ್ಲಿ ನಿಂತ ಕನಕರು ವೇದೋಪನಿಷತ್ತುಗಳನ್ನು ಕರಗತ ಮಾಡಿಕೊಂಡಿದ್ದರು ಅಷ್ಟೇ ಅಲ್ಲದೆ ಮುಂದೆ ಯಾವ ಪಂಡಿತ್ತೋತ್ತಮ ನಾದರೂ ಕನಕನ ಜ್ಞಾನದ ಮುಂದೆ ಕುಬ್ಜ ಅನ್ನಿಸುವಷ್ಟು ಅವರು ಸಾಧನೆಯನ್ನು ಮಾಡಿದರು. ಈ ಕನಕರ ಶಬ್ದಭಂಡಾರ ಅದೆಷ್ಟು ಅಗಾಧವಾಗಿತ್ತೆಂದರೆ ಉಗ್ರಗೊಂಡ ನರಸಿಂಹದೇವರು ಹಿರಣ್ಯಕಶುಪುವಿನ ಸಂಹಾರ ಮಾಡಿದ ಬಗೆಯನ್ನು ಬಣ್ಣಿಸಿದ ಕೀರ್ತನೆಯೆ ಅವರ ಶಬ್ದಸಾಗರಕ್ಕೆ ಸಾಕ್ಷಿಯಾಗಿದೆ. ಇನ್ನು ಗುರು ವ್ಯಾಸತೀರ್ಥರ ರೀತಿಯಲ್ಲೇ ಕನಕರಿಗೂ ಕೂಡ ದೇವರ ಹಾಡುಗಳು, ಸಂಕೀರ್ತನೆಗಳು ಎಂದರೆ ಬಹಳ ಅಚ್ಚುಮೆಚ್ಚು, ಕನಕದಾಸರು ತಾವು ಪೂರ್ವಾಶ್ರಮದಲ್ಲಿ ದಂಡನಾಯಕರಾಗಿದ್ದಾಗ ವಿಜಯನಗರ ಸಾಮ್ರಾಜ್ಯಕ್ಕೆ ಹೋಗುತ್ತಿದ್ದರು ಅಲ್ಲಿನ ಸಕಲ ರಾಜವೈಭವ ಹಾಗೂ ಸಾಮ್ರಾಜ್ಯದ ಆಗುಹೋಗುಗಳ ಅನುಭವಗಳನ್ನು ಬರಹರೂಪಕ್ಕೆ ತಂದರು ಅದು ಮುಂದೆ ‘ಮೋಹನ ತರಂಗಿಣಿ’ಯಾಯಿತು. ಅದರಲ್ಲಿ ತನ್ನ ಧರ್ಮ ಪತ್ನಿಯ ಬಗ್ಗೆಯೂ ಉಲ್ಲೇಖಿಸಲಾಗಿದೆ. ಕನಕದಾಸರು ತಮಗೂ ಹಾಗೂ ದೇವರಿಗಿರುವ ಸಂಬಂಧದ ಬಗ್ಗೆ ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡಿದ್ದರು. ಅಲ್ಲದೆ ಶ್ರೀಹರಿಯನ್ನು ತಮ್ಮ ಒಡೆಯನಾಗಿ, ಇನಿಯನಾಗಿ ಹೀಗೆ ಅನೇಕ ವಿಧಗಳಲ್ಲಿ ಸಂಬೋಧಿಸುತ್ತಿದ್ದರು. ಎಲ್ಲದಕ್ಕಿಂತ ಕನಕರ ಕೀರ್ತನೆಯಲ್ಲಿ ಅತಿ ಮನಸ್ಸಿಗೆ ತಟ್ಟುವಂಥದ್ದು ಎಂದರೆ ‘‘ದಾಸನಾಗು ವಿಶೇಷನಾಗು'' ಎನ್ನುವ ಕೀರ್ತನೆ ಅದರ ಉದ್ದಕ್ಕೂ ಭಗವಂತನನ್ನು ಒಲಿಸಿಕೊಳ್ಳುವುದಕ್ಕೆ ಆಶಾ, ಕ್ಲೇಶ ಹಾಗೂ ದೋಷ ಎನ್ನುವ ಮೂರು ಗುಣಗಳನ್ನು ತ್ಯಜಿಸಿದರೆ ಸಾಕು ಯಾವ ಪುಣ್ಯಕ್ಷೇತ್ರ, ಪವಿತ್ರ ಸ್ನಾನ, ಜಪತಪಗಳ ಅಗತ್ಯವಿಲ್ಲವೆಂದು ತೀರಾ ಸರಳವಾದ ಪದಗಳಲ್ಲಿ ಭಕ್ತಿ ಮಾರ್ಗದ ಕಡೆಗೆ ಸಾಗುವ ಬಗೆಯನ್ನು ತಿಳಿಸಿದರು. ಹೀಗೆ ವಿಶೇಷ ಕೀರ್ತನೆಗಳನ್ನು ರಚಿಸುತ್ತಿದ್ದ ಕನಕದಾಸರಿಗೆ ಉಡುಪಿಯಲ್ಲಿ ನಡೆಯಿತು ಎಂದು ಹೇಳಲಾಗುವ ಒಂದು ಅವಮಾನದ ಬಗ್ಗೆ ಇವತ್ತಿಗೂ ಸಾಕಷ್ಟು ರೋಚಕ ಕಥೆಗಳು ಚಾಲ್ತಿಯಲ್ಲಿವೆ. ಅವತ್ತಿಗೆ ವ್ಯಾಸತೀರ್ಥರಿಗೂ ಉಡುಪಿಗೂ ಒಂದು ಬಾಂಧವ್ಯ ಇತ್ತು. ಅದೇ ಗೌರವದ ಮೇರೆಗೆ ಅವರನ್ನು ಉಡುಪಿಗೆ ಆಹ್ವಾನಿಸಲಾಗಿತ್ತು. ಈ ಸಂದರ್ಭದಲ್ಲಿ ವ್ಯಾಸತೀರ್ಥರು ಕನಕದಾಸರನ್ನು ಕೂಡ ತಮ್ಮ ಜೊತೆಗೆ ಕರೆದುಕೊಂಡು ಉಡುಪಿಗೆ ಬರುವರು. ಅಲ್ಲಿ ಕನಕರ ಮೂಲಕ ಸಮಾಜದ ಡೊಂಕುಗಳನ್ನು ತಿದ್ದುವ ಕಾರ್ಯಕ್ಕೆ ವ್ಯಾಸತೀರ್ಥರು ನಿರ್ಧರಿಸಿದರು. ಉಡುಪಿಗೆ ಕನಕದಾಸರು ಬರುವ ಬಗ್ಗೆ ಸಿಡಿಮಿಡಿಗೊಂಡಿದ್ದ ಕೆಲವರು ಯಾವುದೇ ಕಾರಣಕ್ಕೂ ಕನಕರನ್ನು ದೇವಾಲಯದ ಒಳಕ್ಕೆ ಬಿಡಬಾರದು ಎನ್ನುವ ನಿರ್ಧಾರಕ್ಕೆ ಬಂದರು, ಹೀಗಾಗಿ ಕನಕದಾಸರು ದೇವಾಲಯದ ಪ್ರಾಂಗಣದಲ್ಲೇ ನಿಂತು ದೇವರನ್ನು ಪ್ರಾರ್ಥಿಸಬೇಕಾಯಿತು. ಹೀಗೆ ಸುಮಾರು ನಾಲ್ಕು ವಾರಗಳು ಉರುಳಿದವು ಕನಕದಾಸರನ್ನು ಮಾತ್ರ ಕೃಷ್ಣನ ದರ್ಶನಕ್ಕೆ ಒಳಗೆ ಬರೋದಕ್ಕೆ ದೇವಾಲಯದ ಆಡಳಿತ ಬಿಡಲಿಲ್ಲ. ಕನಕದಾಸರು ಕೂಡ ಕೃಷ್ಣನನ್ನು ನೋಡದೆ ನಾನು ಇಲ್ಲಿಂದ ಹೋಗೋದಿಲ್ಲ ಎಂದು ನಿರ್ಧರಿಸಿದರು. ಕೊನೆಗೊಂದು ದಿನ ಪಶ್ಚಿಮಾಭಿಮುಖವಾಗಿ ಕೂತಿದ್ದ ಕನಕರಿಗೆ ಅಲ್ಲೇ ದೇವರು ತಿರುಗಿ ದರ್ಶನ ಕೊಟ್ಟರು. ಎಂದು ಹೇಳಲಾಗುತ್ತಿದೆಯಾದರೂ ಉಡುಪಿಯ ಕನಕನ ಕಿಂಡಿಯ ಬಗ್ಗೆ ಸ್ವತಃ ಕನಕದಾಸರ ಕೃತಿಗಳಲ್ಲಾಗಲಿ ಮಠದ ದಾಖಲೆಗಳಲ್ಲಾಗಲಿ ಎಲ್ಲೂ ಉಲ್ಲೇಖ ಸಿಗುವುದಿಲ್ಲ. ಉಡುಪಿಯ ಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಕ್ರಿ,ಶ 1238ರಲ್ಲಿ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪನೆ ಮಾಡಿದ್ದರು ಅಂತ ಹೇಳಲಾಗುತ್ತದೆ. ಅವರಿಗೆ ಕೃಷ್ಣನ ವಿಗ್ರಹ ಪಶ್ಚಿಮದಲ್ಲೇ ಸಿಕ್ಕಿದ್ದರಿಂದ ಅದನ್ನು ಪಶ್ಚಿಮಕ್ಕೆ ಪ್ರತಿಷ್ಠಾಪಿಸಿದರು ಎನ್ನುವುದು ದಾಖಲೆಗಳಿಂದ ನಮಗೆ ಸಿಗುವ ಮಾಹಿತಿ. ಅದೇನೆ ಆದರೂ ಮುಂದೆ ಪಶ್ಚಿಮದ ಕಿಂಡಿ 'ಕನಕನ ಕಿಂಡಿ'ಯಾಗಿ ಪ್ರಸಿದ್ಧಿ ಪಡೆಯಿತು. ಕನಕದಾಸರ ಆರಾಧ್ಯ ದೈವ ಕಾಗಿನೆಲೆಯಲ್ಲಿರುವ ಆದಿಕೇಶವ ಹೀಗಾಗಿ ಅವರ ಅಂಕಿತನಾಮ ಕೂಡ ‘ಕಾಗಿನೆಲೆಯ ಆದಿಕೇಶವ' ಎಂದೇ ಆಗಿತ್ತು. ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗಗಳಲ್ಲಿ ಅವನು ನಿರಂತರವಾಗಿ ಸಂಚರಿಸುತ್ತಾ ಭಕ್ತಿ ಮಾರ್ಗದ ಉಪದೇಶ ಮಾಡಿದನು.ಆ ಸಂದರ್ಭದಲ್ಲಿ ಅವರು ಅನೇಕ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿ ಚಿಂತನ-ಮಂಥನಗಳನ್ನು ಮಾಡುತ್ತಿದ್ದರು ಅವರ ಸಾಹಸ, ತರ್ಕ ಅವರಿಗೆ ಆದ ಬೇಸರದ ಸಂಗತಿ ಗಳನ್ನು ಕೀರ್ತನೆಗಳ ವಸ್ತುವನ್ನಾಗಿ ಬಳಸಿಕೊಂಡರು. ತಮ್ಮ ಗುರುಗಳಾದ ವ್ಯಾಸತೀರ್ಥರು ಹಾಗೂ ಸಮಕಾಲೀನರಾದ ಪುರಂದರದಾಸರ ಅಗಾದ ಜ್ಞಾನಸಂಪತ್ತು, ಪರಮಾತ್ಮನೆಡೆಗೆ ಅವರಲ್ಲಿದ್ದ ನಿಷ್ಕಲ್ಮಶ ಪ್ರೇಮದ ಕುರಿತಾಗಿ ಕೂಡ ಕನಕರು ಹಾಡಿ ಹೊಗಳಿದ್ದಾರೆ, ಕನಕದಾಸರು ಮುಂದೆ ‘ಶ್ರೀವೈಷ್ಣವ ಸಿದ್ದಾಂತ'ದತ್ತಾ ಒಲವನ್ನು ಹೊಂದಿದ್ದರು ಎನ್ನುವ ಉಲ್ಲೇಖ ಕೂಡ ಸಿಗುತ್ತದೆ. ಜೊತೆಗೆ ತಮಗೆ ದಾರಿ ತೋರಿದ್ದ ವ್ಯಾಸತೀರ್ಥರ ಚಿಂತನೆಗಳ ಸೆಳೆತದಿಂದಾಗಿ ತಾತ್ವಿಕತೆಯ ಆಕರ್ಷಣೆಗೊಳಗಾದ ಅವರ ಕೀರ್ತನೆಗಳಲ್ಲಿ ಮಹಾಪ್ರಭಾವ ಎದ್ದು ಕಾಣುತ್ತದೆ.
ಹೀಗಾಗಿ ಕನಕರ ಅನೇಕ ಕೃತಿಗಳು, ಕೀರ್ತನೆಗಳು ಧರ್ಮದ ಚೌಕಟ್ಟಿನಲ್ಲೇ ಇವೆ. ಅವತ್ತಿನ ಮೌಢ್ಯಗಳ ವಿರುದ್ಧ ತಮ್ಮ ಕೀರ್ತನೆಗಳಲ್ಲಿ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಿದರು. ಕನಕದಾಸರು ತಮ್ಮ ಜೀವಿತಾವಧಿಯಲ್ಲಿ ‘ಮೋಹನ ತರಂಗಣಿ', ನಳಚರಿತ್ರೆ ಎನ್ನುವ ಎರಡು ಮಹಾನ್ ಕೃತಿಗಳನ್ನು ರಚಿಸಿದರು. ಅಂತೆಯೆ ಹರಭಕ್ತಿಸಾರ ಹಾಗೂ ರಾಮಧ್ಯಾನ ಚರಿತ್ರೆಗಳು ಕೂಡ ಅವರ ಸಮಾಜದ ಬಗೆಗಿನ ನಿಲುವಿಗೆ ಸಾಕ್ಷಿ ಅಂತಿದೆ. ಆರೋಗ್ಯಪೂರ್ಣ ಸಮಾಜದ ಕನಸು ಕಂಡಿದ್ದ ಸಂತ ಭಕ್ತ ಕನಕದಾಸರು ಕ್ರಿ. ಶ. 1609ರಲ್ಲಿ ಆದಿಕೇಶವನನ್ನು ಸೇರಿಕೊಂಡರು. ಹೀಗೆ ಕನಕದಾಸರು ಓರ್ವ ಕೀರ್ತನೆಕಾರರಾಗಿ, ಕವಿಯಾಗಿ, ಕರ್ನಾಟಕ ಸಂಗೀತಕಾರರಾಗಿ, ಹರಿದಾಸ ಪಂಥದ ಪ್ರಚಾರಕನಾಗಿ, ಜನಸಾಮಾನ್ಯ ರಲ್ಲೇ ಸಾಮಾನ್ಯನಾಗಿ, ಜನತೆಯ ಮೂಢಾಚಾರ, ಕಂದಾಚಾರಗಳನ್ನು ಕಿತ್ತೊಗೆದ ಸಂತಪುರುಷ ಕನಕದಾಸರ ಬದುಕು ನಿಜಕ್ಕೂ ಮನುಕುಲಕ್ಕೆ ಬೆಳಗಿದ ಭಕ್ತಿಜ್ಯೋತಿ.
-ಸತೀಶ್ ಕುಮಾರ್ ಎ. ಎಸ್.,
ಇತಿಹಾಸ ಉಪನ್ಯಾಸಕರು,
ವೀರಾಜಪೇಟೆ.
ಮೊ: 9632432315