ಕುಶಾಲನಗರ, ಡಿ. ೧೧: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘ ಪರಿಸರ ಸಂರಕ್ಷಣೆಯ ಹಿನ್ನೆಲೆಯಲ್ಲಿ ಹಸಿರು ನಿಧಿ ಸ್ಥಾಪಿಸಿದ್ದು, ತಾ. ೧೩ ರಂದು ಗಿಡ ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಎಂ.ಎA. ಶಾಹಿರ್ ತಿಳಿಸಿದರು.
ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೧೩ ರಂದು ಕೂಡುಮಂಗಳೂರು ಸರಕಾರಿ ಪ್ರೌಢಶಾಲೆಯಲ್ಲಿ ಸುವರ್ಣ ಸ್ವಾತಂತ್ರೋತ್ಸವ ವನಸಿರಿ ಹೆಸರಿನಲ್ಲಿ ಗಿಡ ನೆಡುವ ಯೋಜನೆಗೆ ಚಾಲನೆ ನೀಡಲಾಗುವುದು. ಸದಸ್ಯರಿಂದ ಹಸಿರು ನಿಧಿಗೆ ವಂತಿಕೆ ಪಡೆದು ಅದರ ಜೊತೆ ಸಂಘದ ವಾರ್ಷಿಕ ಲಾಭಾಂಶದಿAದ ಒಂದು ಮೊತ್ತವನ್ನು ಸೇರಿಸಿ ಹಸಿರು ನಿಧಿ ಸ್ಥಾಪಿಸಲಾಗಿದೆ. ೨೦೧೬ ರಿಂದ ಹಸಿರು ನಿಧಿ ವಂತಿಕೆ ಹಣವನ್ನು ಸಂಘದ ಸದಸ್ಯರಿಂದ ಪಡೆಯಲು ಪ್ರಾರಂಭಿಸಲಾಗಿದ್ದು, ಇದುವರೆಗೆ ೫ ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹವಾಗಿದೆ.
ಸAಘದ ಕಾರ್ಯವ್ಯಾಪ್ತಿ ಯಲ್ಲಿರುವ ಕೆಲವು ಪ್ರದೇಶದಲ್ಲಿ ೩೫೦ ರಿಂದ ೫೦೦ ಗಿಡಗಳನ್ನು ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ನಿರ್ವಹಣೆ, ಗೊಬ್ಬರ, ಸುರಕ್ಷತೆ ಇನ್ನಿತರ ವ್ಯವಸ್ಥೆಗಳು ಸೇರಿದಂತೆ ೧ ಗಿಡಕ್ಕೆ ತಲಾ ರೂ. ೧,೫೦೦ ವೆಚ್ಚ ತಗುಲಲಿದೆ ಎಂದು ಮಾಹಿತಿ ನೀಡಿದರು.
ಸಂಘದ ನಿರ್ದೇಶಕ ವಿ.ಸಿ.ಅಮೃತ್ ಮಾತನಾಡಿ, ಸಂಘದ ಪ್ರತಿಯೊಬ್ಬ ಸದಸ್ಯನೂ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಯೋಜನೆ ರೂಪಿಸಲಾಗಿದೆ. ಗಿಡನೆಟ್ಟ ಪ್ರತಿ ಸದಸ್ಯನ ಹೆಸರನ್ನು ಗಿಡ ನಾಮಫಲಕದಲ್ಲಿ ಅಳವಡಿಸ ಲಾಗುವುದು ಎಂದರು.
ಗೋಷ್ಠಿಯಲ್ಲಿ ನಿರ್ದೇಶಕರಾದ ಎಂ.ವಿ. ನಾರಾಯಣ್, ಕವಿತಾ ಮೋಹನ್, ಎನ್.ಇ. ಶಿವಪ್ರಸಾದ್, ಸಿಇಓ ಶ್ರೀಜೇಶ್ ಇದ್ದರು.