ವೀರಾಜಪೇಟೆ, ಡಿ.12: ಪ್ರವಾಸ ಮಾಡುವುದರಿಂದ ಲೋಕದ ಅನುಭವವು ಹೆಚ್ಚಾಗುತ್ತದೆ,ದೂರದ ಊರುಗಳಲ್ಲಿ ಇರುವ ಜನರ ಬದುಕನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಉಪನ್ಯಾಸಕ ಕಿಗ್ಗಾಲು ಜಿ ಹರೀಶ್ ತಿಳಿಸಿದರು.

ಸಮೀಪದ ಶ್ರೀ ಅರಮೇರಿ ಕಳಂಚೇರಿ ಮಠದಲ್ಲಿ 205 ನೇಯ ಹೊಂಬೆಳಕು ತತ್ವಚಿಂತನ ಗೋಷ್ಠಿಯಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡುತ್ತ ಭಾರತದ ಪೂರ್ವೋತ್ತರ ರಾಜ್ಯಗಳ ಪ್ರವಾಸಕಥನವನ್ನು ಹಂಚಿಕೊಂಡರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಶಿಕ್ಷಕ ಎಸ್.ಡಿ. ಪ್ರಶಾಂತ್ ಪ್ರವಾಸದಿಂದ ಬದುಕಿನ ದೃಷ್ಟಿಕೋನವು ಬದಲಾಗುತ್ತದೆಯೆಂದು ತಿಳಿಸಿದರು. ಶ್ರೀಮಠದ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಪ್ರವಾಸಕ್ಕೆ ಆಸಕ್ತಿಯನ್ನು ತೋರಬೇಕು ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಕಿಗ್ಗಾಲು ಎಸ್ ಗಿರೀಶ್ ರವರ ಸ್ವರ್ಗಮಹಲ್ ರಹಸ್ಯ ಪತ್ತೆದಾರಿ ಕಾದಂಬರಿಯನ್ನು ಅನಾವರಣಗೊಳಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಾ.ನರಸಿಂಹನ್ ಮಾತನಾಡಿ ಕಾದಂಬರಿಗಳನ್ನು ಓದುವುದರಿಂದ ಸಾಹಿತ್ಯದಲ್ಲಿ ಆಸಕ್ತಿಯು ಹೆಚ್ಚುತ್ತದೆ ಎಂದು ವಿವರಿಸಿದರು. ಮಠದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.