ಸಿದ್ದಾಪುರ, ಡಿ. 12: ಗ್ರಾಮ ಪಂಚಾಯಿತಿ ನೌಕರರಿಗೆ ಹಾಗೂ ಪೌರ ಕಾರ್ಮಿಕರಿಗೆ ಕನಿಷ್ಟ ವೇತನವನ್ನು ನೀಡಬೇಕೆಂದು ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಪಿ.ಆರ್. ಭರತ್ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ 700ಕ್ಕೂ ಅಧಿಕ ಮಂದಿ ಗ್ರಾ.ಪಂ ನೌಕರರ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ 100ಕ್ಕೂ ಅಧಿಕ ಮಂದಿ ನೌಕರರಿಗೆ ಕೆಲವು ಗ್ರಾ.ಪಂ.ನ ಆಡಳಿತ ಮಂಡಳಿ ಕನಿಷ್ಟ ವೇತನ ನೀಡದೇ ದುಡಿಸಿಕೊಳ್ಳುತ್ತಿದೆ ಎಂದು ದೂರಿದರು. ಸರ್ಕಾರವು ಕನಿಷ್ಟ ವೇತನ ನೀಡಬೇಕೆಂದು ತಿಳಿಸಿದ್ದರೂ ಕೂಡ ಕೆಲವು ಗ್ರಾ.ಪಂ ಗಳು ನಿರ್ಲಕ್ಷ್ಯ ವಹಿಸುತ್ತಿದ್ದು ಇಲ್ಲದ ಸಲ್ಲದ ನಿಯಮಗಳ ನೆಪವೊಡ್ಡಿ ನೌಕರರಿಗೆ ಸಮರ್ಪಕವಾಗಿ ವೇತನ ನೀಡುತ್ತಿಲ್ಲವೆಂದು ಆರೋಪಿಸಿದರು. ಜಿಲ್ಲೆಯಲ್ಲಿ ಗ್ರಾ.ಪಂ ನೌಕರರ 185 ಖಾಲಿ ಹುದ್ದೆ ಇದ್ದು ಅವುಗಳನ್ನು ಭರ್ತಿ ಮಾಡುತ್ತಿಲ್ಲ. ಅಲ್ಲದೇ ಪಂಚಾಯಿತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಮುಂಬಡ್ತಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿದರು.

ಕೆಲವು ಗ್ರಾ.ಪಂ ಕಚೇರಿಗಳಲ್ಲಿ ಪಿ.ಡಿ.ಓ.ಗಳು ಇಲ್ಲದೇ ಗ್ರಾಮಸ್ಥರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಕೆಲವು ಪಂಚಾಯಿತಿಯ ನೌಕರರಿಗೆ ಆಡಳಿತ ಮಂಡಳಿ ಒತ್ತಡ ಹೇರಿ ಕೆಲಸ ಮಾಡಿಸುತ್ತಿದೆ ಎಂದು ಆಪಾದಿಸಿದರು. ಇದು ಖಂಡನೀಯ ಎಂದರು. ಗೋಷ್ಠಿಯಲ್ಲಿ ಗ್ರಾ.ಪಂ ನೌಕರರ ಸಂಘದ ಪದಾಧಿಕಾರಿಗಳಾದ ಮಹದೇವ, ವೆಂಕಟೇಶ್, ಎನ್.ಎಸ್ ರವಿ ಇನ್ನಿತರರು ಹಾಜರಿದ್ದರು.