ಸೋಮವಾರಪೇಟೆ, ಡಿ.12: ಪಟ್ಟಣದ ಖಾಸಗಿ ಬಸ್ ನಿಲ್ದಾಣ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ತಪ್ಪಿದಲ್ಲಿ ಸ್ಥಳದಲ್ಲೇ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಖಾಸಗಿ ಬಸ್ ನಿಲ್ದಾಣದಲ್ಲಿ ನಿಲುಗಡೆಗೊಳ್ಳುವ ಬಸ್ನಲ್ಲಿ ತೆರಳುವ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕ ಪ್ರಯಾಣಿಕರು ತಿಂಡಿ ತಿನಿಸುಗಳ ಪೊಟ್ಟಣವನ್ನು ಬಸ್ನ ಕಿಟಕಿಯಿಂದ ಹೊರ ಹಾಕುತ್ತಿದ್ದು, ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಇಡೀ ಬಸ್ ನಿಲ್ದಾಣ ಆವರಣದಲ್ಲಿ ಪ್ಲಾಸ್ಟಿಕ್, ಪೊಟ್ಟಣಗಳು ಕಂಡುಬರುತ್ತಿವೆ.
ಅಂಗಡಿ ಮುಂಗಟ್ಟುಗಳಿಂದ ತಿಂಡಿ ತಿನಿಸು ಖರೀದಿಸಿ ಬಸ್ನಲ್ಲಿ ಕುಳಿತುಕೊಂಡು ತಿನ್ನುವ ಬಹುತೇಕ ವಿದ್ಯಾರ್ಥಿಗಳು ಖಾಲಿ ಪೊಟ್ಟಣ, ಪ್ಲಾಸ್ಟಿಕ್ ಕವರ್ಗಳನ್ನು ಕಿಟಕಿ ಮೂಲಕ ಹೊರ ಹಾಕುತ್ತಿರುವುದು ಮಾಮೂಲಿಯಾಗಿದೆ. ಇದರಿಂದಾಗಿ ಪಟ್ಟಣದ ಸ್ವಚ್ಛತೆಗೆ ಅಡ್ಡಿಯಾಗಿದ್ದು, ಎಲ್ಲೆಂದರಲ್ಲಿ ಕಸ ಕಂಡುಬರುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ಸಿಬ್ಬಂದಿಗಳು, ನಿಲ್ದಾಣದಲ್ಲಿ ನಿಲುಗಡೆಗೊಂಡಿದ್ದ ಬಸ್ನ ಒಳಗೆ ತೆರಳಿ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.
ಒಂದು ವೇಳೆ ಬಸ್ನ ಕಿಟಕಿಯಿಂದ ತ್ಯಾಜ್ಯ ಹೊರ ಹಾಕಿದರೆ ಸ್ಥಳದಲ್ಲೇ ದಂಡ ವಿಧಿಸಲಾಗುವುದು. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದ ಅವರ, ಬಸ್ ನಿಲ್ದಾಣ ವ್ಯಾಪ್ತಿಯಲ್ಲಿರುವ ಅಂಗಡಿಗಳಿಗೆ ತೆರಳಿ, ತಿಂಡಿ ತಿನಿಸು ನೀಡುವಾಗ ಸ್ವಚ್ಛತೆಯ ಪಾಠ ಹೇಳುವಂತೆ ಮಾಲೀಕರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭ ಪ.ಪಂ. ಆರೋಗ್ಯಾಧಿಕಾರಿ ಜಾಸಿಂ ಖಾನ್, ಸದಸ್ಯರಾದ ಮೃತ್ಯುಂಜಯ, ಎಸ್. ಮಹೇಶ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.