ಸೋಮವಾರಪೇಟೆ, ಡಿ. 12: ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳು ದೀರ್ಘ ಬಾಳಿಕೆ ಬರಬೇಕಾದರೆ ಚರಂಡಿ ಅಗತ್ಯವಾಗಿದೆ. ಕಾಮಗಾರಿ ನಡೆಯುವ ಸಂದರ್ಭ ಸಾರ್ವಜನಿಕರು ಕೆಲಸದ ಬಗ್ಗೆ ಜಾಗ್ರತೆ ವಹಿಸಿದರೆ ಕಳಪೆಗೆ ಆಸ್ಪದ ಇರುವುದಿಲ್ಲ. ಇದರೊಂದಿಗೆ ಚರಂಡಿ ನಿರ್ಮಾಣಕ್ಕೆ ಸ್ಥಳ ನೀಡಿದರೆ ರಸ್ತೆಯೂ ದೀರ್ಘಕಾಲ ಬಾಳಿಕೆ ಬರುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.
ಎನ್‍ಡಿಆರ್‍ಎಫ್, ಸಿಎಂಜಿ ಎಸ್‍ವೈ, ಮಲೆನಾಡು ಪ್ರದೇಶಾಭಿವೃದ್ಧಿ, 2021-22ನೇ ಸಾಲಿನ ಮಳೆಹಾನಿ ಪರಿಹಾರ ನಿಧಿ, 50-54 ಯೋಜನೆ ಯಡಿ ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. 1.13 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವ ರಸ್ತೆ ಕಾಂಕ್ರೀಟ್, ಡಾಂಬರು, ಚರಂಡಿ, ಮೋರಿ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲೆಡೆಯೂ ಸರ್ವಋತು ರಸ್ತೆಯನ್ನು ನಿರ್ಮಾಣ ಮಾಡುವುದೇ ನಮ್ಮ ಗುರಿಯಾಗಿದೆ. ಕಾಂಕ್ರೀಟ್ ರಸ್ತೆಗಳ ನಿರ್ಮಾಣದಿಂದ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ದೀರ್ಘಕಾಲ ಬಾಳಿಕೆಯೂ ಬರಲಿದೆ. ಈಗಾಗಲೇ ನಿರ್ಮಿಸಿರುವ ಡಾಂಬರು ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿಯೂ ನಡೆಯಲಿದೆ. ಮಳೆ ನಿಂತ ತಕ್ಷಣ ಎಲ್ಲಾ ಕಾಮಗಾರಿಗಳೂ ಆರಂಭವಾಗಲಿವೆ ಎಂದು ರಂಜನ್ ಹೇಳಿದರು.
ಇದರೊಂದಿಗೆ ಎನ್‍ಡಿಆರ್‍ಎಫ್ ಯೋಜನೆಯಡಿ ಮಡಿಕೇರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 15 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಎಲ್ಲಾ ಗ್ರಾ.ಪಂ.ಗಳಿಗೆ ಅನುದಾನ ಹಂಚಿಕೆಯಾಗಿದೆ. ಕಾವೇರಿ ನೀರಾವರಿ ನಿಗಮದಿಂದ ಕ್ಷೇತ್ರದ 6 ಗ್ರಾ.ಪಂ.ಗಳಾದ ಕೊಡ್ಲಿಪೇಟೆ, ಬ್ಯಾಡಗೊಟ್ಟ, ಹಂಡ್ಲಿ, ಹೆಬ್ಬಾಲೆ, ಶಿರಂಗಾಲ, ತೊರೆನೂರು ಭಾಗದಲ್ಲಿ ರೂ. 20 ಕೋಟಿ ವೆಚ್ಚದಲ್ಲಿ ಕೆಲಸಗಳು ಆರಂಭವಾಗಲಿವೆ ಎಂದರು.
ತೋಳೂರುಶೆಟ್ಟಳ್ಳಿ ಗ್ರಾಮದ ದೇವಾಲಯಕ್ಕೆ ಈಗಾಗಲೇ 6.80 ಲಕ್ಷ ಅನುದಾನ ಒದಗಿಸಲಾಗಿದೆ. ಇದೇ ಗ್ರಾಮದಲ್ಲಿ 27 ಕೋಟಿ ವೆಚ್ಚದ ಅಂಬೇಡ್ಕರ್ ವಸತಿ ಶಾಲೆಯೂ ನಿರ್ಮಾಣವಾಗುತ್ತಿದೆ ಎಂದ ರಂಜನ್, ಅಭಿವೃದ್ಧಿ ವಿಚಾರದಲ್ಲಿ ಈವರೆಗೆ ರಾಜಕಾರಣ ಮಾಡಿಲ್ಲ; ಮತ ನೀಡಿಕೆ ಪ್ರಮಾಣ ಕಡಿಮೆಯಿದ್ದರೂ ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ತೋಳೂರುಶೆಟ್ಟಳ್ಳಿ ಗ್ರಾಮ, ನಡ್ಲಕೊಪ್ಪ, ಸುಗ್ಗಿ ದೇವಸ್ಥಾನ ರಸ್ತೆ, ನಗರಳ್ಳಿ, ಕೆರೆಕೊಪ್ಪ, ಎಡದಂಟೆ, ಸಿಂಗನಹಳ್ಳಿ, ಚಿಕ್ಕತೋಳೂರು, ದೊಡ್ಡತೋಳೂರು, ಇನಕನಹಳ್ಳಿ, ಕಂಬಳ್ಳಿ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ನವೀನ್, ಅಭಿವೃದ್ಧಿ ಅಧಿಕಾರಿ ಮಂಜುಳಾ, ಸದಸ್ಯರಾದ ಮೋಹಿತ್, ರುದ್ರಪ್ಪ, ದಿವ್ಯ, ಪ್ರವೀಣ್, ಪ್ರಮುಖರಾದ ಕೆ.ಕೆ. ಸುಧಾಕರ್, ರಾಜಗೋಪಾಲ್, ಪರಮೇಶ್ವರ್, ಮಾಚಯ್ಯ, ದಿವಾಕರ್, ಉಮೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.