ಸುಂಟಿಕೊಪ್ಪ, ಡಿ. 12: ಕಂಬಿಬಾಣೆ ಗ್ರಾ.ಪಂ. ಮಟ್ಟದ ಗ್ರಾಮೀಣ ಕ್ರೀಡಾ ಕೂಟಕ್ಕೆ ಗ್ರಾ.ಪಂ. ಅಧ್ಯಕ್ಷÀ ಮಧು ನಾಗಪ್ಪ ಚಾಲನೆ ನೀಡಿದರು. ಕಂಬಿಬಾಣೆ ಗ್ರಾಮ ಪಂಚಾಯಿತಿ ಗ್ರಾಮೀಣ ಕ್ರೀಡಾ ಕೂಟವನ್ನು ಉತ್ತೇಜಿಸುವ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತದ ನಿರ್ದೇಶನದ ಮೇರೆ ಕ್ರೀಡಾಕೂಟವನ್ನು ಅತ್ತೂರು ನಲ್ಲೂರು ಕಂಬಿಬಾಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದು, ಪುರುಷರಿಗೆ ಕಬಡ್ಡಿ, ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ, ಮಹಿಳೆಯರಿಗೆ ಥ್ರೋಬಾಲ್, ಪಾಸಿಂಗ್ ದಿ ಬಾಲ್ ಮತ್ತು ಹಗ್ಗಜಗ್ಗಾಟ ಮತ್ತು 1 ರಿಂದ 7ನೇ ತರಗತಿ ವರೆಗಿನ ಬಾಲಕ ಬಾಲಕಿಯರಿಗೆ 100 ಮೀ. ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಗ್ರಾ.ಪಂ. ವ್ಯಾಪ್ತಿಯ ಕ್ರೀಡಾಪಟುಗಳು ಗ್ರಾಮೀಣ ಕ್ರೀಡೆಯಲ್ಲಿ ಪಾಲ್ಗೊಂಡು ಕ್ರೀಡಾ ಪ್ರತಿಭೆಯನ್ನು ಅನಾವರಣ ಗೊಳಿಸಿದರು.
ವಿಜೇತ ತಂಡ ಹಾಗೂ ವೈಯಕ್ತಿಕ ಕ್ರೀಡೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಕ್ರೀಡಾಪಟುಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕ್ರೀಡಾಕೂಟ ಕಾರ್ಯ ಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಎಂ.ಎನ್. ಅಶ್ವಿನಿ, ಸದಸ್ಯರುಗಳಾದ ಆರ್.ಆರ್. ಮೋಹನ, ಕೆ.ಬಿ. ಕೃಷ್ಣ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಧುಮತಿ ಪಂಚಾಯಿತಿ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯ ಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಶಾಲಾ ಶಿಕ್ಷಕರು ಮತ್ತು ಗ್ರಾಮಸ್ಥರು ಕ್ರೀಡಾಕೂಟದಲ್ಲಿ ಪಾಲ್ಗೊಂಡರು.