ವೀರಾಜಪೇಟೆ, ಡಿ. ೧೦: ವಿಶೇಷ ಅಗತ್ಯತೆಯುಳ್ಳ ಮಕ್ಕಳು ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು. ಅಂತಹ ಮಕ್ಕಳನ್ನು ಸಮಾಜದಲ್ಲಿ ಪ್ರತಿಯೊಬ್ಬರು ಗೌರವದಿಂದ ಕಾಣುವಂತಾಗಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು

ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಕೊಡಗು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಪನ್ಮೂಲ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ಸರಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲೂಕಿನ ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಗವಿಕಲತೆ ಒಂದು ಶಾಪವಲ್ಲ, ವಿಕಲಚೇತನ ಮಕ್ಕಳನ್ನು ಇತರೆ ಎಲ್ಲ ಮಕ್ಕಳಂತೆ ಸರಿಸಮಾನವಾಗಿ ನೋಡಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶೇಷ ಅಗತ್ಯತೆಯುಳ್ಳ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದು ಅದರ ಸದುಪಯೋಗವನ್ನು ಪಡೆದುಕೊಳ್ಳಲು ಮಕ್ಕಳ ಪೋಷಕರು ಮುಂದೆ ಬರಬೇಕು. ಹಾಗೂ ವೈದ್ಯಕೀಯ ತಪಾಸಣೆ ನಂತರ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಂಡು ಉತ್ತಮ ಆರೋಗ್ಯವಂತರಾಗಬೇಕು ಎಂದರು.

ತಪಾಸಣಾ ಶಿಬಿರ ಉದ್ಘಾಟನೆ ಸಂದರ್ಭ ತಾಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಕೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ, ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್, ಕೇತ್ರ ಸಂಪನ್ಮೂಲ ಅಧಿಕಾರಿ ವನಜಾಕ್ಷಿ, ದೈಹಿಕ ಶಿಕ್ಷಕ ಪಿ.ಪ್ರವೀಣ್, ಶಿಕ್ಷಣ ಇಲಾಖೆಯ ಉತ್ತಪ್ಪ, ಮಡಿಕೇರಿಯ ಡಾ,ಕೃಪಲಿನಿ ಅಯ್ಯಪ್ಪ, ಬಿ.ಐ.ಇ.ಆರ್.ಟಿ ಅಜೀತಾ, ಉಪಸ್ಥಿತರಿದ್ದರು. ಕೊಡಗು ವೈದ್ಯಕೀಯ ವಿಜ್ಞಾನ ಬೋದಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು. ವನಜಾಕ್ಷಿ ಸ್ವಾಗತಿಸಿದರು, ಕೆ.ಸಿ.ಗಿತಾಂಜಲಿ ನಿರೂಪಿಸಿದರು. ವಾಮನ ವಂದಿಸಿದರು. ಇದೇ ಸಂದರ್ಭ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗಾಗಿ ಕ್ರೀಡಾಕೂಟ ಏರ್ಪಡಿಸಲಾಗಿತ್ತು.