ಮೂರ್ನಾಡು, ಡಿ. ೧೧: ಇಲ್ಲಿಗೆ ಸಮೀಪದ ಕಿಗ್ಗಾಲು ಗ್ರಾಮದಲ್ಲಿ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಹಾಗೂ ಕಿಗ್ಗಾಲು ಗ್ರಾಮಸ್ಥರ ಜಂಟಿ ಆಶ್ರಯದಲ್ಲಿ ಕಿಗ್ಗಾಲು ಯುವಕ ಸಂಘದ ಹಳೆಯ ಕಟ್ಟಡದಲ್ಲಿ ಕೇಂದ್ರ ಸರಕಾರದ ಜಲಜೀವನ್ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಪೂರ್ವಭಾವಿ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಚಂದ್ರಶೇಖರಯ್ಯ ಈ ಯೋಜನೆಗಾಗಿ ಸರಕಾರವು ಎರಡೂವರೆ ಕೋಟಿ ಹಣವನ್ನು ಕಾಯ್ದಿರಿಸಿರುವುದಾಗಿ ತಿಳಿಸಿದರು. ಪಿಡಿಓ ಚಂದ್ರಮೌಳಿ ಯೋಜನೆಯ ರೂಪುರೇಷೆಗಳನ್ನು ವಿವರಿಸಿದರು. ಅಭಿಯಂತರ ರಶ್ಮಿಯವರು ತಾಂತ್ರಿಕ ವಿವರಣೆಗಳನ್ನು ನೀಡಿ ನೀರಿನ ಟ್ಯಾಂಕ್, ಶುಚಿಗೊಳಿಸುವ ವಿಧಾನ, ಕೊಳವೆ ಸಂಪರ್ಕಗಳ ಮಾಹಿತಿಯನ್ನು ನೀಡಿದರು. ಗ್ರಾಮಸ್ಥರ ಪರವಾಗಿ ಕಿಗ್ಗಾಲು ಎಸ್. ಗಿರೀಶ್ ಮಾತನಾಡಿ, ಈ ಯೋಜನೆಯಿಂದ ಗ್ರಾಮಕ್ಕಾಗುವ ಲಾಭಗಳನ್ನು ವಿವರಿಸಿದರು. ಗ್ರಾಮ ಪಂಚಾಯಿತಿ ಸದಸ್ಯೆ ರೇಖಾ ಉಪಸ್ಥಿತರಿದ್ದರು. ಪಿಡಿಓ ಚಂದ್ರಮೌಳಿ ವಂದಿಸಿದರು.