ಮಡಿಕೇರಿ, ಡಿ. ೧೦: ಕೊಡವ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾವಳಿ ಏಪ್ರಿಲ್ ೧೬ ರಿಂದ ಮೇ ೭ ರ ತನಕ ಬಾಳೆಯಡ ಕುಟುಂಬದ ಆತಿಥ್ಯದಲ್ಲಿ ನಾಪೋಕ್ಲು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರಿಕೆಟ್ ಸಮಿತಿ ಅಧ್ಯಕ್ಷ ನಿವೃತ್ತ ಲೆ.ಕ. ಹಾಗೂ ಒಲಂಪಿಯನ್ ಬಾಳೆಯಡ ಸುಬ್ರಮಣಿ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೨ ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯನ್ನು ಸುಮಾರು ೩೦ ಲಕ್ಷ ವೆಚ್ಚದಲ್ಲಿ ಎರಡು ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ೨೫೦ ಕುಟುಂಬಗಳು ಭಾಗವಹಿಸುವ ನಿರೀಕ್ಷೆ ಇದೆ. ಜನವರಿ ತಿಂಗಳಲ್ಲಿ ಪಂದ್ಯಾವಳಿಯ ಲೋಗೋ ಬಿಡುಗಡೆಯಾಗಲಿದೆ. ನೋಂದವಣಿಗೆ ಕೊಡಗಿನ ಪ್ರಮುಖ ಗ್ರಾಮಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿದ್ದು, ಪಂದ್ಯಾವಳಿಯ ಯಶಸ್ವಿಗಾಗಿ ಒಂದು ಸಮಿತಿ ಹಾಗೂ ಉಪಸಮಿತಿ ರಚಿಸಲಾಗಿದೆ. ಪಂದ್ಯಾವಳಿಯ ವಿಜೇತ ತಂಡಗಳಿಗೆ ಆಕರ್ಷಕ ನಗದು ಹಾಗೂ ಆಕರ್ಷಕ ಟ್ರೋಫಿ

(ಮೊದಲ ಪುಟದಿಂದ) ಸೇರಿದಂತೆ ವೈಯುಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದು ವಿವರಿಸಿದರು.

ಕ್ರಿಕೆಟ್ ಪಂದ್ಯಾಟ ಮುಗಿದ ನಂತರ ಯುವಕರಿಗೆ ಬೇಸಿಗೆ ತರಬೇತಿ ಶಿಬಿರವನ್ನು ಆಯೋಜಿಸಲು ಪ್ರಯತ್ನಿಸುತ್ತೇವೆ. ಹಾಗೂ ಓಪನ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸುವ ಚಿಂತನೆ ಇದೆ ಎಂದರು.

ಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಸದಾ ಕುಶಾಲಪ್ಪ, ಸಮಿತಿ ಸಲಹೆಗಾರ ಕರುಣ್ ಕಾಳಪ್ಪ, ಪ್ರಮುಖರಾದ ಅಂಜು ಸುಬ್ರಮಣಿ, ದಿವ್ಯ ಮಂದಪ್ಪ, ಪಂದ್ಯಾವಳಿ ನಿರ್ದೇಶಕ ಪ್ರತಿಶ್ ಪೂವಯ್ಯ ಇದ್ದರು.