ಕುಶಾಲನಗರ, ಡಿ. ೧೦: ಜಿಲ್ಲೆಯ ಬೃಹತ್ ಜಲಾಶಯ ಹಾರಂಗಿಯ ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವ ಕಾಮಗಾರಿ ಸದ್ಯದಲ್ಲಿಯೇ ಆರಂಭವಾಗಲಿದ್ದು, ಈ ನಿಟ್ಟಿನಲ್ಲಿ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಕುಶಾಲನಗರ ಸಮೀಪದ ಹುದುಗೂರು ಬಳಿ ನಿರ್ಮಾಣಗೊಂಡಿರುವ ಹಾರಂಗಿ ಅಣೆಕಟ್ಟು ಹಿನ್ನೀರು ಭಾಗದಲ್ಲಿ ಭಾರೀ ಪ್ರಮಾಣದ ಹೂಳು ತುಂಬಿದ್ದು, ಜಲಾಶಯದ ವ್ಯಾಪ್ತಿಯಲ್ಲಿ ಸಂಪರ್ಕ ಸೇತುವೆಗಳು ಜಲಮೂಲಗಳು ಸಂಪೂರ್ಣ ಕುಸಿತಕ್ಕೆ ಒಳಗಾಗಿವೆ. ಕಳೆದ ೨೦೧೮ರಿಂದ ಮೂರು ವರ್ಷಗಳ ಕಾಲ ಸುರಿದ ಭಾರೀ ಪ್ರಮಾಣದ ಮಳೆಯಿಂದ ಜಲಾಶಯದ ಹಿನ್ನೀರಿನ ವ್ಯಾಪ್ತಿಯಲ್ಲಿ ಬೆಟ್ಟ ಕುಸಿತ ಕಂಡು ಬಂದಿದ್ದು, ಹೆಚ್ಚಿನ ಪ್ರಮಾಣದ ಹೂಳು ಜಲಾಶಯದಲ್ಲಿ ಸಂಗ್ರಹವಾಗಿರುವುದು ಗೋಚರಿಸಿದೆ.
ಹಾರಂಗಿ ಜಲಾಶಯದಲ್ಲಿ ಗರಿಷ್ಠ ನೀರಿನ ಸಂಗ್ರಹ ಪ್ರಮಾಣ ೮.೫ ಟಿ.ಎಂ.ಸಿ.ಯಾಗಿದ್ದು, ವರ್ಷದ ೩ ಬಾರಿ ಜಲಾಶಯ ಭರ್ತಿಗೊಳ್ಳುವ ಮೂಲಕ ಕೊಡಗು, ಮೈಸೂರು, ಹಾಸನ ಜಿಲ್ಲೆಗಳ ಅಚ್ಚುಕಟ್ಟು ವ್ಯಾಪ್ತಿಯ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುವ ಯೋಜನೆ ಇದಾಗಿದೆ. ಈ ಸಾಲಿನಲ್ಲಿ ಜಲಾಶಯಕ್ಕೆ ಒಟ್ಟು ೪೪.೪೩ ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದ್ದು, ೩೭.೫೪ ಟಿಎಂಸಿ ನೀರನ್ನು ನದಿಗೆ ಹಾಗೂ ೮.೮ ಟಿಎಂಸಿ ನೀರನ್ನು ಕಾಲುವೆ ಮೂಲಕ ಹರಿಸಲಾಗಿದೆ. ಪ್ರಸಕ್ತ ಜಲಾಶಯದಲ್ಲಿ ಸಂಗ್ರಹÀವಾಗಿರುವ ೨.೭೪ ಟಿಎಂಸಿ ನೀರಿನ ಪ್ರಮಾಣ
(ಮೊದಲ ಪುಟದಿಂದ) ಖಾಲಿ ಮಾಡಿದಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ ದೊರೆಯಲಿದೆ.
ಕಳೆದ ಕೆಲವು ವರ್ಷಗಳಿಂದ ಜಲಾಶಯದ ಹಿನ್ನೀರು ಮತ್ತು ಕೆಳಭಾಗದ ಜನತೆ ವ್ಯತಿರಿಕ್ತ ಪರಿಣಾಮಕ್ಕೆ ಒಳಗಾಗಿದ್ದು, ಸರ್ಕಾರದಿಂದ ಕಾವೇರಿ ನೀರಾವರಿ ನಿಗಮದ ಮೂಲಕ ಅಂದಾಜು ರೂ. ೧೩೦ ಕೋಟಿ ವೆಚ್ಚದಲ್ಲಿ ಜಲಾಶಯದ ಹೂಳೆತ್ತುವುದು ಮತ್ತು ಅಭಿವೃದ್ಧಿ, ಜಲಾಶಯದ ೨ ಬದಿಗಳಲ್ಲಿ ಮತ್ತೆ ಹೂಳು ಸೇರದಂತೆ ಅತ್ಯಾಧುನಿಕ ತಂತ್ರಜ್ಞಾನದ ಗೇಬಿಯನ್ ವಾಲ್ ನಿರ್ಮಾಣ ಹಾರಂಗಿ ಹಿನ್ನೀರು ವ್ಯಾಪ್ತಿಯ ಸೇತುವೆಗಳ ಪುನಶ್ಚೇತನ ಹಾಗೂ ನದಿಯ ಸಂಪೂರ್ಣ ರಕ್ಷಣೆ ಮಾಡುವ ಯೋಜನೆ ಇದಾಗಿದೆ.
ಸಂಬAಧಿಸಿದ ಯೋಜನೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳುವಂತೆ ಜಲಾಶಯದ ಹಿನ್ನೀರು ವ್ಯಾಪ್ತಿಯ ಬೆಳೆಗಾರರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಈ ಸಂಬAಧ ಈಗಾಗಲೇ ಹಲವು ಉನ್ನತ ತಂತ್ರಜ್ಞಾನದ ಸಂಸ್ಥೆಗಳು ಸರ್ವೆ ಕಾರ್ಯ ನಡೆಸಿದ್ದು, ಕಾಮಗಾರಿಯ ಪ್ರತಿ ಅಂಶಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ಕೂಡ ನೀಡಲಾಗಿದೆ. ಎರಡು ವರ್ಷಗಳ ಹಿಂದೆ ಮಹಾರಾಷ್ಟç ಮೂಲದ ಸಂಸ್ಥೆಯೊAದು ಕಾಮಗಾರಿಯ ಟೆಂಡರ್ ಕರೆದಿದ್ದರೂ ಅದು ತಾಂತ್ರಿಕ ಕಾರಣಗಳಿಂದ ರದ್ದುಗೊಂಡಿತ್ತು.
ನAತರ ದೆಹಲಿ, ಸಿಂಗಾಪುರ ಮತ್ತಿತರ ಸ್ಥಳಗಳಿಂದ ಉನ್ನತ ಮಟ್ಟದ ತಾಂತ್ರಿಕ ತಂತ್ರಜ್ಞರ ತಂಡ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಹಲವು ಹಂತಗಳ ಸರ್ವೆ ಕಾರ್ಯದೊಂದಿಗೆ ಯೋಜನೆಯ ರೂಪುರೇಷೆ ಸಿದ್ದಪಡಿಸಿ ಸರ್ಕಾರದ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ೨ ವರ್ಷಗಳ ಅವಧಿಯಲ್ಲಿ ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವ ಕಾಮಗಾರಿ ಪೂರ್ಣಗೊಳಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ. ಈ ಸಂಬAಧ ೧೩೦ ಕೋಟಿ ರೂ. ಯೋಜನೆ ಆರಂಭಕ್ಕೆ, ಟೆಂಡರ್ ಪ್ರಕ್ರಿಯೆ ನಡೆದು ಸೆಪ್ಟೆಂಬರ್ ತಿಂಗಳಲ್ಲಿ ಗುತ್ತಿಗೆದಾರರೊಂದಿಗೆ ಕಾಮಗಾರಿಯ ಕರಾರು ಪತ್ರ ಸಿದ್ದಗೊಂಡಿದೆ.
ಈ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿರುವ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾರಂಗಿ ಜಲಾಶಯ ಹೂಳೆತ್ತುವ ಮತ್ತು ಅಭಿವೃದ್ಧಿ ಕಾಮಗಾರಿಗೆ ಹಣ ಬಿಡುಗಡೆಗೊಂಡಿದ್ದು, ಅಣೆಕಟ್ಟಿನ ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ನದಿ ಮೂಲಗಳ ಸಂರಕ್ಷಣೆಗೆ ಹಲವು ರೀತಿಯ ಕ್ರಿಯಾಯೋಜನೆಗಳನ್ನು ರೂಪಿಸಲಾಗಿದೆ. ಜಲಾಶಯದ ಹೂಳು ತೆರವುಗೊಳಿಸುವುದು ಉಳಿದಂತೆ ಅಭಿವೃದ್ದಿ, ಅತ್ಯಾಧುನಿಕ ತಂತ್ರಜ್ಞಾನದೊAದಿಗೆ ನದಿ ಸಂರಕ್ಷಣೆ ಕಾಮಗಾರಿ ನಡೆಯಲಿದೆ ಎಂದರು.
ವರ್ಷದ ೪ ರಿಂದ ೫ ತಿಂಗಳು ಮಾತ್ರ ಜಲಾಶಯದಲ್ಲಿ ಕಾಮಗಾರಿ ನಡೆಸಲು ಸಾಧ್ಯವಿದ್ದು, ಸೀಮಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹಾರಂಗಿ ಅಣೆಕಟ್ಟು ಕಾರ್ಯಪಾಲಕ ಅಭಿಯಂತರ ಬಿ.ಕೆ ಪುಟ್ಟಸ್ವಾಮಿ ‘ಶಕ್ತಿ’ಗೆ ತಿಳಿಸಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಚಾಲನೆಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.
-ಚಂದ್ರಮೋಹನ್ / ನಾಗರಾಜಶೆಟ್ಟಿ.