ಸೋಮವಾರಪೇಟೆ, ಡಿ. ೯: ಸಂವಿಧಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ ಎಂದು ನಿವೃತ್ತ ಪಾಂಶುಪಾಲ ಹೆಚ್.ಬಿ. ಬೆಳ್ಳಿಯಪ್ಪ ಅಭಿಪ್ರಾಯಿಸಿದರು. ಸಿಪಿಐ(ಎಂಎಲ್)ರೆಡ್ ಸ್ಟಾರ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ೬೬ನೇ ಸ್ಮರಣ ದಿನದ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನವನ್ನು ಅವಶ್ಯಕತೆಗೆ ತಕ್ಕಂತೆ ತಿದ್ದುಪಡಿ ಮಾಡಬಹುದೇ ಹೊರತು ಬದಲಾವಣೆ ಅಸಾಧ್ಯ. ಸಂವಿಧಾನದ ಮೀಸಲಾತಿಯಲ್ಲಿ ಶಾಸಕ, ಸಂಸದರಾದವರು ಸಂವಿಧಾನ ಬದಲಾವಣೆಯ ಹೇಳಿಕೆಗಳನ್ನು ಖಂಡಿಸಬೇಕು. ಆದರೆ ಎಲ್ಲರೂ ಮೌನಕ್ಕೆ ಶರಣಾಗಿರುವುದು ದುರಂತ ಎಂದರು.
ದೇಶಕ್ಕಾಗಿ ಸಂವಿಧಾನ ರಚಿಸಿಕೊಟ್ಟ ಡಾ. ಅಂಬೇಡ್ಕರ್ ಅವರು ಶ್ರೇಷ್ಠ ಮಾನವತಾವಾದಿ. ಅವರು ಕೇವಲ ದಲಿತರು ಮತ್ತು ಶೋಷಿತರ ನಾಯಕರಲ್ಲ. ದೇಶದ ಪ್ರಜೆಗಳ ನಾಯಕರು. ೧೪೦ ದೇಶಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಸಂವಿಧಾನ ಮುಟ್ಟಿ ಪ್ರತಿಜ್ಞೆ ಮಾಡಿದವರು ಸಂವಿಧಾನ ಬದಲಾವಣೆಯ ಮಾತನಾಡುತ್ತಿರುವುದು ವಿಷಾದನೀಯ ಎಂದರು.
ಸಿಪಿಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ರುದ್ರಯ್ಯ ಮಾತನಾಡಿ, ದೇಶ ಅಪಾಯಕಾರಿ ಸ್ಥಿತಿಯಲ್ಲಿದೆ. ಸ್ವತಂತ್ರ ಹೋರಾಟಗಾರರ ಕನಸ್ಸು ಬುಡಮೇಲು ಮಾಡಲಾಗುತ್ತಿದೆ. ಅಂಬೇಡ್ಕರ್ ವಿಚಾರಗಳನ್ನು ಬುಡಮೇಲು ಮಾಡುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ ಸಮಾಜ ಜಾಗೃತವಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಸಿಪಿಐನ ಜಿಲ್ಲಾ ಕಾರ್ಯದರ್ಶಿ ಎಸ್.ಆರ್. ಮಂಜುನಾಥ್, ಸದಸ್ಯರಾದ ಹೆಚ್.ಜೆ. ಜಯಣ್ಣ, ಸಾವಿತ್ರಮ್ಮ, ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಈ. ಸಣ್ಣಯ್ಯ ಉಪಸ್ಥಿತರಿದ್ದರು.