ಪಾಲಿಬೆಟ್ಟ/ ಸಿದ್ದಾಪುರ, ಡಿ. ೧೦: ಪಾಲಿಬೆಟ್ಟದ ಮೀನು ವ್ಯಾಪಾರಿಯ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಪಾಲಿಬೆಟ್ಟದಲ್ಲಿ ಮೀನು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಚರ್ದು ಎಂಬವರ ಪುತ್ರ ಮಹಮ್ಮದ್ ತಾಸಿರ್ ವ್ಯಾಪಾರ ಮುಗಿಸಿಕೊಂಡು ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಆಲ್ಟೊ ಕಾರೊಂದು ಡಿಕ್ಕಿಹೊಡೆದು ಪರಾರಿಯಾಗಿದೆ. ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ತಾಸಿರ್ನನ್ನು ಪಾಲಿಬೆಟ್ಟ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಹಮ್ಮದ್ ತಾಸಿರ್ ಕೊನೆಯುಸಿರೆಳೆದಿದ್ದಾರೆ.
ಮೀನು ವ್ಯಾಪಾರಿ ತಾಸಿರ್ ಹಾಗೂ ಪಾಲಿಬೆಟ್ಟದ ನೌಶಾದ್ ಎಂಬಾತನ ನಡುವೆ ಹಳೇ ವೈಷಮ್ಯ ಇದ್ದು, ಆತನೆ ಕಾರು ಡಿಕ್ಕಿಪಡಿಸಿದ್ದಾನೆ ಎಂದು ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸಂದರ್ಭ ಮೂರ್ನಾಡು ಬಳಿ ಕಾರು ಪತ್ತೆಯಾಗಿದೆ. ಆರೋಪಿ ನೌಶಾದ್ ತಲೆಮರೆಸಿಕೊಂಡಿದ್ದಾನೆ.
-ಪುತ್ತA ಪ್ರದೀಪ್/ ವಾಸು