ಮಡಿಕೇರಿ, ಡಿ. ೯: ಹೃದಯಾಘಾತದಿಂದ ಸಾವನ್ನಪ್ಪಿದ ಜಾರ್ಖಂಡ್‌ನ ರಾಂಚಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೆಂಟ್ರಲ್ ಇಂಡಸ್ಟಿçಯಲ್ ಸೆಕ್ಯುರಿಟಿ ಫೋರ್ಸ್ನ (ಸಿ.ಐ.ಎಸ್.ಎಫ್) ಯೋಧ ಕೆ.ಕೆ ಶಿಜು (೪೮) ಅವರ ಅಂತ್ಯಕ್ರಿಯೆ ಹುಟ್ಟೂರಾದ ಕಡಗದಾಳು ಸಮೀಪದ ಕತ್ತಲೆಕಾಡುವಿನಲ್ಲಿ ಸಕಲ ಸರಕಾರಿ ಗೌರವದೊಂದಿಗೆ ನೆರವೇರಿತು.
ತಾ.೮ ರಂದು ಮಧ್ಯಾಹ್ನ ಸುಮಾರು ೧೨ ಗಂಟೆಗೆ ಹೃದಯಾ ಘಾತ ಸಂಭವಿಸಿ ರಾಂಚಿಯಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶಿಜು ನಿಧನರಾಗಿದ್ದರು. ಆ ಬಳಿಕ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಮೃತದೇಹವನ್ನು ತಂದು ಅಲ್ಲಿಂದ ಆ್ಯಂಬ್ಯುಲೆನ್ಸ್ನಲ್ಲಿ ಕಡಗದಾಳುವಿಗೆ ತಾ. ೯ರ ಮಧ್ಯಾಹ್ನ ತರಲಾಯಿತು.
ಕಡಗದಾಳುವಿನಿಂದ ಮೃತದೇಹ ವನ್ನು ತೆರೆದ ವಾಹನದಲ್ಲಿರಿಸಿ ಸಮೀಪದ ತುರುಕರುಹಟ್ಟಿಯಲ್ಲಿರುವ ಮನೆಗೆ ಮೆರವಣಿಗೆ ನಡೆಸಿ ಕೊಂಡೊಯ್ಯಲಾಯಿತು. ಈ ಸಂದರ್ಭ ಸ್ಥಳೀಯ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಕಾಲ್ನಡಿಗೆಯಲ್ಲಿ ತೆರಳುತ್ತಾ, ‘ಅಮರ್ ರಹೇ, ಅಮರ್ ರಹೇ, ಶಿಜು ಅಮರ್ ರಹೇ’ ಎಂಬ ಘೋಷಣೆ ಹಾಕುತ್ತ, ಯೋಧನಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ತುರುಕರುಹಟ್ಟಿಯ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
(ಮೊದಲ ಪುಟದಿಂದ) ಸಿ.ಐ.ಎಸ್.ಎಫ್. ಅಧಿಕಾರಿಗಳಾದ ರಾಂಚಿಯ ದಿನೇಶ್ ಬಾಬು, ಮೈಸೂರು ವಿಭಾಗದ ವಿ.ಡಿ. ನಾಗರಾಜು ಹಾಗೂ ಸಿಬ್ಬಂದಿಗಳು ಪುಷ್ಪಗುಚ್ಚ ಇಟ್ಟು, ಸಹೋದ್ಯೋಗಿಗೆ ಅಂತಿಮ ಗೌರವ ಸಲ್ಲಿಸಿದರು.
ಜಿಲ್ಲಾಡಳಿತದ ಪರವಾಗಿ ಉಪವಿಭಾಗಧಿಕಾರಿ ಯತೀಶ್ ಉಲ್ಲಾಳ, ಮಡಿಕೇರಿ ತಹಶೀಲ್ದಾರ್ ಪಿ. ಮಹೇಶ್, ಕೊಡಗು ಜಿಲ್ಲಾ ಪೊಲೀಸರ ಪರವಾಗಿ ಮಹಿಳಾ ಪೊಲೀಸ್ ಠಾಣೆಯ ಠಾಣಾಧಿಕಾರಿ ವಾಣಿಶ್ರೀ ಗೌರವ ಸಲ್ಲಿಸಿದ ಬಳಿಕ, ಡಿ.ಎ.ಆರ್. ವಿಭಾಗದ ಸಹಾಯಕ ನಿರೀಕ್ಷಕ ಚೆನ್ನಕೇಶವ ನೇತೃತ್ವದ ತಂಡ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸರಕಾರಿ ಗೌರವ ನೀಡಿದರು.
ಸಾರ್ವಜನಿಕರು, ಕುಟುಂಬಸ್ಥರು ಅಂತಿಮ ದರ್ಶನ ಪಡೆದ ಬಳಿಕ, ಸಂಪ್ರದಾಯ ಬದ್ಧವಾಗಿ ಸಮೀಪದ ಕತ್ತಲೆಕಾಡುವಿನ ಹಿಂದೂ ರುಧ್ರಭೂಮಿಯಲ್ಲಿ ಮಲಯಾಳಿ ಜನಾಂಗದ ವಿಧಿವಿಧಾನದಂತೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಸಹೋದರ ಶೋಜನ್ ಅಗ್ನಿಸ್ಪರ್ಶ ಮಾಡಿದರು. ಮೃತರ ಪತ್ನಿ ಪ್ರಶಿದ, ಪುತ್ರಿಯರಾದ ಶಿವೆಂದು, ಶಿವಾಂಗಿ, ತಾಯಿ ರಾಜಮ್ಮ ರಾಷ್ಟçಧ್ವಜ ಸ್ವೀಕರಿಸಿದರು. ಗ್ರಾ.ಪಂ. ಅಧ್ಯಕ್ಷ ಜಯಣ್ಣ, ಸದಸ್ಯರಾದ ಆನಂದ್, ಭಾರತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಈ ಸಂದರ್ಭ ಇದ್ದರು.