ಕೂಡಿಗೆ, ಡಿ.೯ : ವಿಜ್ಞಾನ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳ ಕೊಡುಗೆ ಅಪಾರವಾದುದು. ವಿದ್ಯಾರ್ಥಿಗಳು ಅಂತಹ ವಿಜ್ಞಾನಿಗಳ ಸಾಧನೆ ಮತ್ತು ಸಂಶೋಧನೆ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪ ಪ್ರಾಂಶುಪಾಲ ಕೆ.ಎಸ್.ಶಿವಕುಮಾರ್ ಕರೆ ನೀಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಜ್ಯ ಶಿಕ್ಷಣ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ( ಡಿ.ಎಸ್.ಇ.ಆರ್.ಟಿ.) ಹಾಗೂ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿಜ್ಞಾನ ಸಂಘದ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಏರ್ಪಡಿಸಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ವಿಜ್ಞಾನಿಗಳ ಮಾದರಿಯಲ್ಲಿ ಉತ್ತಮ ಸಂಶೋಧನೆಗಳನ್ನು ಕೈಗೊಳ್ಳಲು ಇಂತಹ ವಸ್ತು ಪ್ರದರ್ಶನಗಳು ಪೂರಕ ಹಾಗೂ ಪ್ರೇರಣೆಯಾಗಿವೆ ಎಂದರು. ಡಯಟ್ ನ ಹಿರಿಯ ಉಪನ್ಯಾಸಕಿ ನಿರೂಪ ವೆಸ್ಲಿ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ಹೇಗೆ ವೈಜ್ಞಾನಿಕ ಚಿಂತನೆ ಹಾಗೂ ವಿಜ್ಞಾನದ ಆವಿಷ್ಕಾರಗಳ ಬಗ್ಗೆ ಜ್ಞಾನ ಬೆಳೆಸಬೇಕು ಎಂಬ ಬಗ್ಗೆ ಇಂತಹ ಸ್ಪರ್ಧೆಗಳು ಸಹಕಾರಿಯಾಗಿವೆ ಎಂದರು.

ವಿಜ್ಞಾನವು ಜೀವನದ ಅವಿಭಾಜ್ಯ ಅಂಗವಾಗಿದ್ದು, ವಿದ್ಯಾರ್ಥಿಗಳು ವಿಜ್ಞಾನ ಕಲಿಕೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಪರ್ಧಾ ಕಾರ್ಯಕ್ರಮದ ನೋಡಲ್ ಅಧಿಕಾರಿ ಕೆ.ಜಿ. ನೀಲಕಂಠಪ್ಪ, ಮಕ್ಕಳಲ್ಲಿ ವಿಜ್ಞಾನ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ೬ ವಿವಿಧ ಉಪ ವಿಷಯಗಳ ಕುರಿತು ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಡಯಟ್ ನ ಉಪನ್ಯಾಸಕ ವಿ.ವಿಜಯ್ , ಕಾಲೇಜಿನ ಉಪ ಪ್ರಾಂಶುಪಾಲ ವೈ.ಎಸ್. ಪರಮೇಶ್ವರಪ್ಪ, ಬಿ.ಆರ್.ಪಿ.ಎಸ್.ಎನ್.ಲೋಕೇಶ್, ಚಿತ್ರಕಲಾ ಶಿಕ್ಷಕ ಉ.ರಾ.ನಾಗೇಶ್, ವಿಜ್ಞಾನ ಶಿಕ್ಷಕಿ ಕೆ.ಎಸ್.ಅನಿತಾ, ಶಿಕ್ಷಕರು ಇದ್ದರು. ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಸ್ಪರ್ಧಿಗಳು ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಗಮನ ಸೆಳೆದ ವಿಜ್ಞಾನ ವಸ್ತು ಪ್ರದರ್ಶನ

ಜಿಲ್ಲೆಯ ವಿವಿಧ ಪ್ರೌಢಶಾಲೆಗಳಿಂದ ಮಾರ್ಗದರ್ಶಿ ಶಿಕ್ಷಕರೊಂದಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಭೂಮಿ, ಬಾಹ್ಯಾಕಾಶ, ಪರಿಸರ, ಇಂಜಿನಿಯರಿAಗ್ ಹಾಗೂ ಕಂಪ್ಯೂಟರ್ ಕ್ಷೇತ್ರ ಸೇರಿದಂತೆ ವಿಜ್ಞಾನದ ವಿವಿಧ ಉಪ ವಿಷಯಗಳ ಶೀರ್ಷಿಕೆಯೊಂದಿಗೆ ವಿವಿಧ ಮಾದರಿಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

ಪ್ರದರ್ಶನದಲ್ಲಿ ಮಳೆ ನೀರು ಕೊಯ್ಲು, ಜಲಪಾತ, ಪವನ ಶಕ್ತಿಯಿಂದ ವಿದ್ಯುತ್ ತಯಾರಿಕೆ, ಪರಿಸರ ಸಂರಕ್ಷಣೆ, ತ್ಯಾಜ್ಯ ವಿಲೇವಾರಿ, ಕೈಗಾರಿಕೆಗಳ ಸ್ಥಾಪನೆ, ಭೂಮಿ ಫಲವತ್ತತೆಯ ಸಂರಕ್ಷಣೆ, ವೈಜ್ಞಾನಿಕ ಮಾದರಿಗಳು, ತರಕಾರಿ, ಎಣ್ಣೆ ಕಾಳು, ಆರೋಗ್ಯ ಭಾಗ್ಯ, ಶಿಕ್ಷಣ, ರೇಡಿಯೇಷನ್, ಗ್ರಹಗಳು, ನೀರಿನ ಸಂರಕ್ಷಣೆ ಹೀಗೆ ಹತ್ತಾರು ಮಾದರಿಗಳು ಪ್ರದರ್ಶನದಲ್ಲಿ ಗಮನ ಸೆಳೆದವು.