ಕಣಿವೆ, ಡಿ. ೧೦: ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಪೂರಕ ಚಟುವಟಿಕೆಗಳು ನಿರಂತರವಾಗಿ ಜರುಗುತ್ತಿರುವುದು ಸಂತಸ ತಂದಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಹೇಳಿದರು.
ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಹಿಳಾ ಲೇಖಕಿ ಶಿಕ್ಷಕಿ ಮಾಲಾದೇವಿ ಮೂರ್ತಿ ಅವರು ಹೊರತಂದ "ನಿಧಿ ಮುಗಿಯದ ಅಂಗೈಯಲ್ಲಿ" ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷೆಯಲ್ಲಿ ಸಾಕಷ್ಟು ಕವನ ಸಂಕಲನ, ಕಥೆ, ಕಾದಂಬರಿಗಳು ರಚನೆಯಾಗಿವೆ. ಅನೇಕ ಕವಿಗಳು ತಮ್ಮ ಭಾವನೆಗಳನ್ನು ಅಕ್ಷರ ರೂಪದಲ್ಲಿ ಹೊರತಂದು ಕನ್ನಡದ ಸಾರಸ್ವತ ಲೋಕದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದರು.
ಕವನ ಸಂಕಲನ ಬಿಡುಗಡೆ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಟಿ.ಪಿ. ರಮೇಶ್, ಮಾತನಾಡಿ, ಭಾವನೆಗಳು ತುಂಬಿದ ಕವಿತೆಗಳು ಇದರಲ್ಲಿವೆ. ಕವಿಯ ಕವಿತೆಗಳು ಭಾವಗೀತೆಗಳಾಗಿ ಸಮಾಜದಲ್ಲಿ ಬೆಳಕು ಚೆಲ್ಲಿದರಷ್ಟೇ ಸಾಕು; ಅದು ಕೃತಿಕಾರರಿಗೆ ಸಲ್ಲುವ ಬಹು ದೊಡ್ಡ ಗೌರವ ಎಂದು ಹೇಳಿದರು.
ಸಾಹಿತಿ ಕಣಿವೆ ಭಾರದ್ವಾಜ್ ಮಾತನಾಡಿ, ಜಿಲ್ಲೆಯಲ್ಲಿ ಯುವ ಕವಿಗಳಿಗೆ ಕೊರತೆಯಿಲ್ಲದಿದ್ದರೂ, ವಿಮರ್ಶಕರ ಕೊರತೆ ಇದೆ. ಸಾಹಿತಿಗಳಿಗೆ, ಕೃತಿಕಾರರಿಗೆ ಹಾಗೂ ಬರಹಗಾರರಿಗೆ ಕಾರ್ಯಾಗಾರದ ಅಗತ್ಯವನ್ನು ಸಾಹಿತ್ಯ ಪರಿಷತ್ತು ಮನಗಾಣಬೇಕಿದೆ ಎಂದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.
ಲೇಖಕಿ ಮಾಲಾದೇವಿ ಮೂರ್ತಿ ಮಾತನಾಡಿದರು. ಈ ಸಂದರ್ಭ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಮೂರ್ತಿ, ಕಾನ್ಬೈಲು ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಂ.ವಿ.ಮAಜೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ರೇವತಿ ರಮೇಶ್, ನಿರ್ದೇಶಕ ಮಂಜುನಾಥ್, ಸೋಮವಾರಪೇಟೆ ಜೇಸೀ ಅಧ್ಯಕ್ಷೆ ಎಂ.ಎ.ರುಬೀನಾ, ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಶಿಕ್ಷಣ ಇಲಾಖೆಯ ಸಿಆರ್ ಪಿ ಶಾಂತಕುಮಾರ್, ಸಾಹಿತಿ ವಹಿದ್ ಜಾನ್, ಟಿ.ಜಿ.ಪ್ರೇಮಕುಮಾರ್, ಸದಾಶಿವ ಪಲ್ಲೇದ ಇದ್ದರು. ಇದೇ ಸಂದರ್ಭ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಂದ ಸ್ವರಚಿತ ಕವನ ವಾಚನ ನಡೆಯಿತು.