ಮಡಿಕೇರಿ, ಡಿ. ೧೦: ಕಟ್ಟಡ ನಿರ್ಮಾಣದ ಸಲಕರಣೆಗಳನ್ನು ಕಳವು ಮಾಡಿ ಗುಜರಿ ಅಂಗಡಿಗೆ ಮಾರಾಟ ಮಾಡಿದ್ದ ಕಳ್ಳನನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಮುಳಿಯ ಹಿಮವನ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿನ ಕಬ್ಬಿಣ ಸಾಮಗ್ರಿಗಳನ್ನು ಕಳವು ಮಾಡಿದ ತ್ಯಾಗರಾಜ ಕಾಲೋನಿಯ ಆಟೋ ಚಾಲಕ ರಫೀಕ್ ಎಂಬಾತ ಮಾರುಕಟ್ಟೆ ಬಳಿಯ ಗುಜರಿ ಅಂಗಡಿಗೆ ಮಾರಾಟ ಮಾಡಿದ್ದ. ಆತನನ್ನು ಬಂಧಿಸಿದ ನಗರ ಠಾಣಾಧಿಕಾರಿ ಶ್ರೀನಿವಾಸ್ ಹಾಗೂ ಸಿಬ್ಬಂದಿಗಳು ಇಂದು ಗುಜರಿ ಅಂಗಡಿಗೆ ತೆರಳಿ ತಪಾಸಣೆ ಮಾಡಿ ಕಳವು ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.