ಮಡಿಕೇರಿ, ಡಿ. ೮: ಕುಯಿಲು ಮಾಡಿದ ಕಾಫಿಯೊಂದಿಗೆ ಕಾರ್ಮಿಕರನ್ನು ಕೊಂಡೊಯ್ಯುತ್ತಿದ್ದ ಪಿಕ್ ಅಪ್ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿಕೊಂಡ ಪರಿಣಾಮ ಕಾರ್ಮಿಕರೋರ್ವರು ದುರ್ಮರಣ ಹೊಂದಿದ್ದು, ಮತ್ತೋರ್ವರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ಮಧ್ಯಾಹ್ನ ವೇಳೆ ಸಂಭವಿಸಿದೆ.
ಮುಕ್ಕೋಡ್ಲು ಬಳಿಯ ನಾಗಬಾಣೆ ಕಾಲೋನಿ ನಿವಾಸಿ ಬೆಳ್ಳಿ ಎಂಬವರೇ ದುರ್ಮರಣ ಹೊಂದಿದ ವ್ಯಕ್ತಿ. ನಾಗಬಾಣೆ ಬಳಿಯ ನಾಗರಾಜು ಎಂಬವರಿಗೆ ಸೇರಿದ ಕಾಫಿ ತೋಟದಿಂದ ಕಾಫಿ ಕುಯಿಲು ಮಾಡಿ ಕಾಫಿ ಸಾಗಿಸುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಮಾದಾಪುರದ ದೇವಯ್ಯ ಎಂಬವರಿಗೆ ಸೇರಿದ ಪಿಕ್ ಅಪ್ ವಾಹನದಲ್ಲಿ(ಕೆಎ ೧೨ ಎ ೧೨೭೦) ಏಳು ಮಂದಿ ಕಾರ್ಮಿಕರೊಂದಿಗೆ ಕಾಫಿ ಹಾಗೂ ಸೌದೆ ಸಾಗಿಸಲಾಗುತ್ತಿತ್ತು. ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ ರಸ್ತೆ ಬದಿಯ ಚರಂಡಿಗೆ ಮಗುಚಿಕೊಂಡಿದೆ.
ತಲೆಕೆಳಗಾಗಿ ಮಗುಚಿ ಬಿದ್ದ ವಾಹನದ ಕೆಳಗೆ ಸಿಲುಕಿಕೊಂಡ ಬೆಳ್ಳಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಕಾರ್ಮಿಕ ಕೃಷ್ಣ ಕೂಡ ವಾಹನದಡಿ ಸಿಲುಕಿಕೊಂಡಿದ್ದು, ಸ್ಥಳೀಯರ ಸಹಕಾರದಿಂದ
(ಮೊದಲ ಪುಟದಿಂದ) ಆತನನ್ನು ಹೊರತೆಗೆದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವಾಹನ ಚಾಲಕ ಮಾದಾಪುರದ ಪಾಪಣ್ಣ ಎಂಬಾತ ಪಾನಮತ್ತನಾಗಿದ್ದುದರಿಂದ ವಾಹನ ನಿಯಂತ್ರಣಕ್ಕೆ ಬಾರದೆ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆಪಾದಿಸಿದ್ದಾರೆ.
ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ಚಾಲಕನನ್ನು ಬಂದಿಸಿ, ವಾಹನ ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಮುಕ್ಕೋಡ್ಲುವಿನಲ್ಲಿ ಪಿಕ್ ಅಪ್ ಅವಘಡ: ವ್ಯಕ್ತಿ ದುರ್ಮರಣ