ಚುನಾವಣೆ - ಗುಜರಾತ್ನಲ್ಲಿ ಬಿ.ಜೆ.ಪಿ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವು
ಅಹಮದಾಬಾದ್\ಶಿಮ್ಲಾ, ಡಿ. ೮: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದೆ. ಗುಜರಾತ್ನಲ್ಲಿ ಬಿ.ಜೆ.ಪಿ. ಗೆಲುವು ಸಾಧಿಸಿದ್ದು, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಗುಜರಾತ್ನಲ್ಲಿ ೧೮೨ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಬಿ.ಜೆ.ಪಿ. ೧೫೬ ಸ್ಥಾನಗಳಲ್ಲಿ ಜಯ ಸಾಧಿಸಿದೆ. ಕಾಂಗ್ರೆಸ್ ೧೭ ಸ್ಥಾನಗಳಲ್ಲಿ ಆಮ್ ಆದ್ಮಿ ೫ ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದ್ದು, ೪ ಮಂದಿ ಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ೬೮ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೪೦ ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಬಿ.ಜೆ.ಪಿ. ೨೫ ಸ್ಥಾನಗಳಲ್ಲಿ ಗೆದ್ದಿದ್ದು, ೩ ಮಂದಿ ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಗುಜರಾತ್ನಲ್ಲಿ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಎರಡನೇ ಬಾರಿಗೆ ಮುಂದುವರಿಯಲಿದ್ದು, ತಾ. ೧೨ ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿರುವ ಹಿನ್ನೆಲೆ ಮುಖ್ಯಮಂತ್ರಿಯಾಗಿದ್ದ ಬಿ.ಜೆ.ಪಿ.ಯ ಜೈರಾಮ್ ಠಾಕೂರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಡೆಯಾಜ್ಞೆ ರದ್ದುಗೊಳಿಸಿದ ನ್ಯಾಯಾಲಯ
ಬೆಂಗಳೂರು, ಡಿ. ೮: ಮೈಸೂರಿನ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಬರೆದು ಅಯೋಧ್ಯಾ ಪ್ರಕಾಶನ ಪ್ರಕಟಿಸಿರುವ ಟಿಪ್ಪು ನಿಜ ಕನಸುಗಳು ಪುಸ್ತಕ ಮಾರಾಟದ ಮೇಲಿದ್ದ ತಡೆಯಾಜ್ಞೆಯನ್ನು ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ಇಂದು ರದ್ದುಗೊಳಿಸಿದೆ. ಇತಿಹಾಸದಿಂದ ಯಾವುದೇ ಬೆಂಬಲ ಅಥವಾ ಸಮರ್ಥನೆ ಇಲ್ಲದೆ ಪುಸ್ತಕದಲ್ಲಿ ಟಿಪ್ಪುವಿನ ಬಗ್ಗೆ ತಪ್ಪು ಮಾಹಿತಿ ಇದೆ ಎಂದು ಆರೋಪಿಸಿ ಜಿಲ್ಲಾ ವಕ್ಫ್ ಬೋರ್ಡ್ ಸಮಿತಿಯ ಮಾಜಿ ಅಧ್ಯಕ್ಷ ಬಿ.ಎಸ್. ರಫೀವುಲ್ಲಾ ಅವರು ಇತ್ತೀಚೆಗೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪುಸ್ತಕದಲ್ಲಿ ಬಳಸಿರುವ ‘ತುರುಕರು' ಎಂಬ ಪದವು ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಯಾಗಿದೆ ಎಂದು ಹೇಳಿದ್ದರು. ಪುಸ್ತಕದ ಪ್ರಕಟಣೆಯು ಅಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುತ್ತದೆ, ಸಾರ್ವಜನಿಕ ಶಾಂತಿಗೆ ಭಂಗ ತರುತ್ತದೆ ಎಂದು ಅವರು ಪ್ರತಿಪಾದಿಸಿದ್ದರು. ಅವರ ವಾದವನ್ನು ಅಂಗೀಕರಿಸಿದ್ದ ನ್ಯಾಯಾಲಯ, ಟಿಪ್ಪು ನಿಜಕನಸುಗಳು ಪುಸ್ತಕ ವಿತರಣೆ ಮತ್ತು ಮಾರಾಟಕ್ಕೆ ತಡೆಯಾಜ್ಞೆ ನೀಡಿತ್ತು.
ಟ್ರ್ಯಾಕ್ಟರ್ ಪಲ್ಟಿ, ಮದುವೆಗೆ ತೆರಳುತ್ತಿದ್ದ ೬ ಮಂದಿ ದುರ್ಮರಣ
ಅಮರಾವತಿ, ಡಿ. ೮: ಟ್ರಾಕ್ಟರ್ ಪಲ್ಟಿಯಾಗಿ ಕಾಲುವೆಗೆ ಉರುಳಿಬಿದ್ದ ಪರಿಣಾಮ ಮದುವೆಗೆ ತೆರಳುತ್ತಿದ್ದ ಆರು ಮಂದಿ ಸಾವನ್ನಪ್ಪಿದ್ದು, ಇತರ ೨೨ ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಸಂಭವಿಸಿದೆ. ಪುತಲಪಟ್ಟು ಮಂಡಲದ ಲಕ್ಷö್ಮಯ್ಯ ಊರು ಗ್ರಾಮದ ಬಳಿ ಬುಧವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಟ್ರ್ಯಾಕ್ಟರ್ ಚಾಲಕ, ಇಬ್ಬರು ಮಹಿಳೆಯರು ಹಾಗೂ ಅನೇಕ ಮಕ್ಕಳು ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯ ಕೈಗೊಂಡರು. ಗಾಯಾಳುಗಳನ್ನು ಚಿತ್ತೂರು, ತಿರುಪತಿ ಮತ್ತು ವೆಲ್ಲೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಜೆಟ್ಟಿಪಲ್ಲೆ ಗ್ರಾಮದಲ್ಲಿ ಇಂದು ಮದುವೆ ನಿಗದಿಯಾಗಿತ್ತು. ಮದು ಮಗನೊಂದಿಗೆ ಟ್ರ್ಯಾಕ್ಟರ್ನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿದೆ. ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಬದುಕುಳಿದವರು ಪೊಲೀಸರಿಗೆ ತಿಳಿಸಿದ್ದಾರೆ. ಮದು ಮಗ ಹೇಮಂತ್ ಕುಮಾರ್ ಕೂಡಾ ಗಾಯಗೊಂಡಿದ್ದು, ಚಿತ್ತೂರು ಜಿಲ್ಲಾಧಿಕಾರಿ ಹಾಗೂ ಎಸ್ಪಿ ಚಿತ್ತೂರು ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಒದಗಿಸಿದ್ದಾರೆ.
ಮೂವರು ಅಧಿಕಾರಿಗಳ ಅಮಾನತು, ಒತ್ತುವರಿ ತೆರವು
ಬೆಳಗಾವಿ, ಡಿ. ೮: ರಾಯಬಾಗ ಪಟ್ಟಣದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಮೀನನ್ನು ಕೊನೆಗೂ ತೆರವುಗೊಳಿಸಲಾಗಿದ್ದು, ಆ ಜಾಗಕ್ಕೆ ತಂತಿ ಬೇಲಿ ಹಾಕಲಾಗಿದೆ. ರಾಯಬಾಗ ಪಟ್ಟಣದಲ್ಲಿ ಮೀನುಗಾರಿಕೆ ಇಲಾಖೆ ಸೇರಿದ ೧ ಎಕರೆ ೨೦ ಗುಂಟಾ ಜಮೀನಿನಲ್ಲಿ ೬೫x೭೦ ಅಡಿ ವಿಸ್ತೀರ್ಣದಲ್ಲಿ ಖಾಸಗಿ ವ್ಯಕ್ತಿಗಳು ಅಂಗಡಿಗಳನ್ನು ನಿರ್ಮಿಸಿದ್ದರು. ಅಲ್ಲದೆ ಮೀನುಗಾರಿಕೆ ಇಲಾಖೆಗೆ ಸೇರಿದ್ದ ಸರ್ಕಾರಿ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಯ ಹೆಸರಿಗೆ ಪರಭಾರೆ ಮಾಡಲಾಗಿತ್ತು. ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿಗಳು ತನಿಖೆ ಆದೇಶಿಸಿದ್ದು, ಬೆಳಗಾವಿ ಡಿಸಿ ಡಾ. ನಿತೇಶ್ ಪಾಟೀಲ್ ಮತ್ತು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ವಿಚಾರಣೆ ನಡೆಸಿದಾಗ, ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ಪರಭಾರೆ ಮಾಡಿರುವುದು ಕಂಡು ಬಂದಿದೆ. ಅವರು ತನಿಖೆಯ ಸಮಗ್ರ ವರದಿಯನ್ನು ವಾಸ್ತವಾಂಶಗಳೊAದಿಗೆ ಪೌರಾಡಳಿತ ಇಲಾಖೆಗೆ ಸಲ್ಲಿಸಿದ್ದರು. ವರದಿ ಆಧರಿಸಿ ಪೌರಾಡಳಿತ ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರ, ರಾಯಬಾಗ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸಂಜೀವ್ ಮಾಂಗ್, ಬಿಲ್ ಕಲೆಕ್ಟರ್ ವೆಂಕಟೇಶ ಚಲವಾದಿ ಮತ್ತು ಕಂದಾಯ ನಿರೀಕ್ಷಕ ಬಿ.ಲಕ್ಷ್ಮೀಶ ಅವರನ್ನು ಅಮಾನತುಗೊಳಿಸಿದೆ. ರಾಯಬಾಗ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜಮೀನಿನ ಒತ್ತುವರಿ ತೆರವು ಮಾಡಿ ತಂತಿ ಬೇಲಿ ಅಳವಡಿಸಿದ್ದಾರೆ.
ಬೆಂಗಳೂರಿನಲ್ಲಿ ನಾವಿನ್ಯತಾ ಅನುಭವ ವಸ್ತು ಸಂಗ್ರಹಾಲಯ ಸ್ಥಾಪನೆ: ಸಿಎಂ ಬೊಮ್ಮಾಯಿ
ಬೆಂಗಳೂರು, ಡಿ. ೮: ಕರ್ನಾಟಕದಲ್ಲಿ ಅಭಿವೃದ್ಧಿ ಹಾಗೂ ನಾವಿನ್ಯತೆಯ ಪಯಣ, ಇದಕ್ಕೆ ಕಾರಣವಾಗಿರುವ ಸಾಧಕರು, ಇವರ ಸಾಧನೆಗಳನ್ನು ಬಿಂಬಿಸುವ (ಇನ್ನೋವೇಷನ್ ಎಕ್ಸ್ಪೀರಿಯನ್ಸ್ ಮ್ಯೂಸಿಯಂ) ನಾವಿನ್ಯತಾ ಅನುಭವ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರು ವಿನ್ಯಾಸಕಾರರ ಸಮುದಾಯದ ವತಿಯಿಂದ ಆಯೋಜಿಸಿದ್ದ ಬಿ.ಎಲ್.ಆರ್ ಡಿಸೈನ್ ವೀಕ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ನಾವಿನ್ಯತೆ, ಅವಿಷ್ಕಾರಗಳ ಬಗ್ಗೆ ಮಾಹಿತಿ ನೀಡುವ ಅಂರ್ರಾಷ್ಟಿçÃಯ ಮಟ್ಟದ ಮ್ಯೂಸಿಯಂ ಇದಾಗಲಿದ್ದು, ಹಸಿರಿನ ಪರಿಸರವನ್ನೂ ಒಳಗೊಂಡಿರಲಿದೆ. ಇದರಿಂದ ವಿದೇಶಿ ಪ್ರವಾಸೋದ್ಯಮವನ್ನು ಪ್ರೋತ್ಸಾಹ ದೊರೆಯುತ್ತದೆ. ಈ ಮ್ಯೂಸಿಯಂನಿAದ ಯುವ ಆವಿಷ್ಕಾರಿಗಳು, ವಿನ್ಯಾಸಕಾರರಿಗೆ ಸ್ಪೂರ್ತಿ ದೊರೆಯಲಿದೆ ಎಂದರು. ಬೆಂಗಳೂರಿನ ೮ ದಿಕ್ಕುಗಳಲ್ಲಿ ೮ ನಗರ ಕೇಂದ್ರಗಳ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಲು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದಕ್ಕೆ ಪೂರಕವಾಗಿ ರಸ್ತೆ, ರೈಲುಗಳನ್ನು ಅಭಿವೃದ್ಧಿಗೊಳಿಸಬಹುದು. ವಿನ್ಯಾಸಕಾರರು ತಾವು ರಚಿಸಿದ ವಿನ್ಯಾಸಗಳ ಬಗ್ಗೆ ಪ್ರಪಂಚಕ್ಕೆ ತಿಳಿಸಬೇಕು. ಬೆಂಗಳೂರು ನಗರವನ್ನು ಉತ್ತಮ ವಿನ್ಯಾಸಹೊಂದಿರುವ, ಜನಸ್ನೇಹಿಯಾಗಿರುವ ನಗರವನ್ನಾಗಿಸೋಣ. ಇಲ್ಲಿನ ಆವಿಷ್ಕಾರಗಳನ್ನು ಹಾಗೂ ವಿನ್ಯಾಸಗಳನ್ನು ಹೊರದೇಶದವರು ಸ್ಪೂರ್ತಿಯಾಗಿಸಿಕೊಳ್ಳುವಂತೆ ಕೆಲಸ ಮಾಡಬೇಕು. ಇದನ್ನು ಸರ್ಕಾರ ಎಲ್ಲ ರೀತಿಯಲ್ಲಿ ಪ್ರೋತ್ಸಾಹವನ್ನು ನೀಡುತ್ತದೆ ಎಂದರು.
ಭಾರತವನ್ನು ಹೊರಗಿಟ್ಟ ಅಮೇರಿಕ ವಿರುದ್ಧ ಪಾಕ್ ಅಸಮಾಧಾನ
ನವದೆಹಲಿ, ಡಿ. ೮: ಧಾರ್ಮಿಕ ಸ್ವಾತಂತ್ರ್ಯ ಕಪ್ಪು ಪಟ್ಟಿಯಿಂದ ಭಾರತವನ್ನು ಹೊರಗಿಟ್ಟಿರುವ ಅಮೇರಿಕಾದ ನಿರ್ಧಾರವನ್ನು ಪಾಕಿಸ್ತಾನ ಪ್ರಶ್ನಿಸಿದೆ. ಪಾಕಿಸ್ತಾನವನ್ನು ಅಮೇರಿಕ ಧಾರ್ಮಿಕ ಸ್ವಾತಂತ್ರ್ಯ ಕಪ್ಪು ಪಟ್ಟಿಗೆ ಸೇರಿಸಿದ್ದು, ಈ ಪಟ್ಟಿ ಪಾಕಿಸ್ತಾನದ ವಾಸ್ತವಗಳಿಂದ ಬೇರೆಯದ್ದೇ ಆಗಿದೆ ಎಂದು ಹೇಳಿದೆ. ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಝಾರ ಬಲೂಚ್ ಈ ಹೇಳಿಕೆ ಬಿಡುಗಡೆ ಮಾಡಿದ್ದು, ಪಾಕಿಸ್ತಾನ ಬಹು ಧರ್ಮೀಯ ದೇಶವಾಗಿದ್ದು, ಬಹುತ್ವದ ಸಮಾಜವಾಗಿದೆ, ಅನ್ಯ ಮತಗಳೆಡೆಗೆ ಸೌಹಾರ್ದತೆಯ ಶ್ರೀಮಂತ ಪರಂಪರೆ ಹೊಂದಿದೆ ಎಂದು ಹೇಳಿದ್ದಾರೆ. ಕಳೆದ ವಾರ ಅಮೇರಿಕ ಪಾಕಿಸ್ತಾನ, ಚೀನಾ, ಕ್ಯೂಬಾ, ನಿಕರಾಗುವಾ ಸೇರಿದಂತೆ ಅನೇಕ ರಾಷ್ಟçಗಳನ್ನು ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬAಧಿಸಿದAತೆ ಆತಂಕಕಾರಿ ಪರಿಸ್ಥಿತಿಯಲ್ಲಿರುವ ದೇಶಗಳ ಪಟ್ಟಿಗೆ ಸೇರಿಸಿತ್ತು. ಅಮೇರಿಕಾದ ಈ ನಿರ್ಧಾರಕ್ಕೆ ಪಾಕಿಸ್ತಾನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಏಕಪಕ್ಷೀಯ ನಿರ್ಧಾರ ಎಂದು ಹೇಳಿದೆ.