*ಗೋಣಿಕೊಪ್ಪ, ಡಿ. ೮: ಕೊಡಗು ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶ ಎಂದು ಸರ್ಕಾರ ಘೋಷಿಸಿದ್ದು, ಜಿಲ್ಲೆಯ ೫೩ ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಕಾಫಿ, ಕಾಳುಮೆಣಸು, ಅಡಿಕೆ ಇನ್ನಿತರ ಬೆಳೆಗಳ ನಷ್ಟ ಸಂಭವಿಸಿದ ವರದಿಯಂತೆ ಮೊದಲ ಹಂತದಲ್ಲಿ ೪ ಸಾವಿರ ಫಲಾನುಭವಿಗಳಿಗೆ ೧೩ ಕೋಟಿ ಪರಿಹಾರ ಧನ ಜಮಾ ಆಗಿದೆ ಎಂದು ರಾಜ್ಯ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ. ಜಿ ಬೋಪಯ್ಯ ಮಾಹಿತಿ ನೀಡಿದ್ದಾರೆ.

ವೀರಾಜಪೇಟೆ ಶಾಸಕರ ಕಚೇರಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಅವರು, ಎರಡನೇ ಹಂತದಲ್ಲಿ ಅರ್ಜಿ ಸಲ್ಲಿಸಿದ ೪೦ ಸಾವಿರ ಬೆಳೆ ನಷ್ಟ ಪರಿಹಾರದ ೧೧೩.೯೯ ಕೋಟಿ ಮೊತ್ತ ಬಿಡುಗಡೆಯಾಗಿದ್ದು, ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ. ಉಳಿದ ಅರ್ಜಿಗಳ ಪರಿಷ್ಕರಣೆಯು ನಡೆಯುತ್ತಿದ್ದು, ಶೀಘ್ರದಲ್ಲಿಯೇ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ರೈತನಿಗೂ ಪರಿಹಾರ ಧನ ಸಿಗಲಿದೆ ಎಂದು ತಿಳಿಸಿದ್ದಾರೆ. ಅರ್ಜಿ ಸಲ್ಲಿಸದೇ ಇರುವ ರೈತರು ಡಿಸೆಂಬರ್ ಹತ್ತರವರೆಗೆ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಒದಗಿಸಲಾಗಿದೆ.

ಅರ್ಜಿ ಸಲ್ಲಿಸುವವರು ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಮತ್ತು ಆರ್.ಟಿ.ಸಿಯಲ್ಲಿ ಒಂದೇ ರೀತಿಯ ಹೆಸರನ್ನು ಹೊಂದಿರಬೇಕಾಗಿದೆ. ಇಲ್ಲವಾದಲ್ಲಿ ತಾಂತ್ರಿಕ ದೋಷ ಎಂದು ಪರಿಹಾರ ಧನ ಸಿಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ವೀರಾಜಪೇಟೆ ತಾಲೂಕು ಬಗರ್‌ಹುಕಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಜಿ.ಪಂ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಇದ್ದರು.