ಕೂಡಿಗೆ, ಡಿ. ೬ : ಸಮೀಪದ ಹೊಸಗುತ್ತಿ ಗ್ರಾಮದಲ್ಲಿ ನೂತನವಾಗಿ ಆರಂಭವಾದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉದ್ಘಾಟನೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಹೈನುಗಾರಿಕೆಯಲ್ಲಿ ಉತ್ತಮ ಅವಕಾಶವಿದ್ದು,ಇದರ ಜೊತೆಯಲ್ಲಿ ಸರಕಾರದ ವತಿಯಿಂದ ವಿವಿಧ ಯೋಜನೆಗಳ ಮೂಲಕ ಹೈನುಗಾರಿಕೆಗೆ ಅನುಕೂಲವಾಗುವ ಸಾಲ ಸೌಲಭ್ಯಗಳ ಜೊತೆಗೆ ಬೇಕಾಗುವ ಸವಲತ್ತುಗಳನ್ನು ನೀಡಲಾಗುತ್ತಿದೆ. ವಿವಿಧ ಯೋಜನೆ ಅಡಿಯಲ್ಲಿ ರಿಯಾಯಿತಿ ದರದಲ್ಲಿ ಹಸುಗಳನ್ನು ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಇದರ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಮುಂದುವರಿಯಬೇಕೆAದು ಅಪ್ಪಚ್ಚು ರಂಜನ್ ತಿಳಿಸಿದರು.

ಮುಖ್ಯ ಅತಿಥಿಯಾಗಿ ಅಗಮಿಸಿದ್ದ ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಮಾತನಾಡಿ, ಮಹಿಳಾ ಸದಸ್ಯರು ಹಾಲು ಉತ್ಪಾದಕರ ಸಂಘಕ್ಕೆ ಗುಣಮಟ್ಟದ ಹಾಲನ್ನು ಹಾಕುವುದರ ಮೂಲಕ ಸಂಘದ ಬೆಳವಣಿಗೆಗೆ ಅನುಕೂಲವಾಗುವುದರ ಜೊತೆಯಲ್ಲಿ ರೈತರು ಆರ್ಥಿಕ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ಸಹಕಾರಿ ಯಾಗುತ್ತದೆ ಎಂದರು. ಕಟ್ಟಡದ ನಿರ್ಮಾಣಕ್ಕೆ ಒಕ್ಕೂಟದ ವತಿಯಿಂದ ೫ ಲಕ್ಷದ ರೂ ವರೆಗೆ ಹಣವನ್ನು ನೀಡಲಾಗುವುದು ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಹೊರಗುತ್ತಿ ಗ್ರಾಮದ ನಿವಾಸಿ ಹಾಲಿ ಹಾಸನ ಜಿಲ್ಲಾ ಕೇಂದ್ರ ಬ್ಯಾಂಕ್‌ನ ವ್ಯವಸ್ಥಾಪಕ ಕುಮಾರ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘ ಅಧ್ಯಕ್ಷೆ ಜಿ ವಿ ಭಾರತಿ ವಹಿಸಿದರು. ವೇದಿಕೆಯಲ್ಲಿ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿ ಚುಚೇಗೌಡ, ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ವೇಣು, ಜಿಲ್ಲಾ ಸಹಕಾರ ಸಂಘದ ಉಪ ನಿಬಂಧಕ ಕೃಷ್ಣ ಪ್ರಸಾದ್, ಅಲೂರು ಗ್ರಾಮ ಪಂಚಾಯಿತಿ ಅದ್ಯಕ್ಷ ಮೋಹನ್ ಕುಮಾರ್, ಸದಸ್ಯರಾದ ಕಿರಣ್, ಒಕ್ಕೂಟದ ವಿಸ್ತಾರಣಾಧಿಕಾರಿ ವೀಣಾ ಸೇರಿದಂತೆ ಹಾಲು ಉತ್ಪಾದಕರ ಸಂಘದ ಸದಸ್ಯರು ವಿವಿಧ ಇಲಾಖೆಯ ಅಧಿಕಾರಿಗಳು ಹಾಸನ ಹಾಲು ಒಕ್ಕೂಟದ ವಿವಿಧ ವಿಭಾಗದ ಅಧಿಕಾರಿ ವರ್ಗದವರು ಹೊಸಗುತ್ತಿ ಗ್ರಾಮದ ಪ್ರಮುಖರು ಹಾಜರಿದ್ದರು.