ಶ್ರೀಮಂಗಲ, ಡಿ. ೬: ತಾ. ೧೯ ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾರತೀಯ ಕಿಸಾನ್ ಸಂಘ ಆಯೋಜಿಸಿರುವ ರೈತ ಘರ್ಜನ ದೆಹಲಿ ಚಲೋ ರ‍್ಯಾಲಿಯಲ್ಲಿ ಕೊಡಗು ಜಿಲ್ಲೆಯ ಭಾರತೀಯ ಕಿಸಾನ್ ಸಂಘದ ವತಿಯಿಂದ ರೈತರು ಭಾಗವಹಿಸುತ್ತಿದ್ದು, ರೈತರ ಉತ್ಪನ್ನಗಳಿಗೆ ವೆಚ್ಚದ ಆಧಾರದಲ್ಲಿ ಲಾಭದಾಯಕ ಬೆಲೆಗಾಗಿ ಒತ್ತಾಯಿಸಲಾಗುವುದು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಮುಕ್ಕಾಟೀರ ಪ್ರವೀಣ್ ಭೀಮಯ್ಯ ವಿವರಿಸಿದರು.

ಪೊನ್ನಂಪೇಟೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಭಾರತೀಯ ಕಿಸಾನ್ ಸಂಘವು ರೈತರ ಏಳಿಗೆಗಾಗಿ ೧೯೭೯ ರಲ್ಲಿ ಸ್ಥಾಪನೆಯಾಗಿದ್ದು, ರೈತರು ಬೆಳೆಯುವ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ಕೇಳುತ್ತಿಲ್ಲ, ಬದಲಾಗಿ ರೈತರ ಉತ್ಪನ್ನಗಳಿಗೆ ವೆಚ್ಚದ ಆಧಾರದಲ್ಲಿ ಲಾಭದಾಯಕ ಬೆಲೆಯನ್ನು ಸರಕಾರ ನೀಡಬೇಕೆಂದು ಎಂದು ಒತ್ತಾಯಿಸುತ್ತದೆ ಎಂದು ಹೇಳಿದರು. ಕೃಷಿ ಬೆಲೆ ಆಯೋಗ ಸ್ಥಾಪಿಸಬೇಕು, ರಸಗೊಬ್ಬರ ಮತ್ತು ರೈತರು ಖರೀದಿಸುವ ಯಂತ್ರೋಪಕರಣಗಳಿಗೆ ಕಂಪನಿಗಳ ಬದಲಾಗಿ ರೈತರಿಗೆ ನೇರವಾಗಿ ಸಹಾಯಧನವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಭಾರತೀಯ ಕಿಸಾನ್ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷ ಕೊಲ್ಲಿರ ಧರ್ಮಜ ಅವರು ಮಾತನಾಡಿ ಕೊಡಗಿನಲ್ಲಿ ಪರಿಸರವನ್ನು ಉಳಿಸಿರುವ ರೈತರು ವನ್ಯಪ್ರಾಣಿ ಸಂಘರ್ಷದಿAದ ಕೃಷಿಯನ್ನು ತ್ಯಜಿಸುವ ಹಂತದಲ್ಲಿದ್ದಾರೆ.ಈ ಸಮಸ್ಯೆಗೆ ಸರಕಾರ ಶಾಶ್ವತ ಪರಿಹಾರವನ್ನು ಒದಗಿಸಬೇಕು. ಸರ್ಕಾರ ಅನೇಕ ಯೋಜನೆಗಳನ್ನು ಮಾಡಿದ್ದರೂ ರೈತರಿಗೆ ಅದನ್ನು ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಗಂಭೀರವಾಗಿ ಪ್ರಯತ್ನಿಸಬೇಕು.

ಈ ಬಗ್ಗೆ ಕಾಫಿ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಅವರು ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದು ೧೦ ಹೆಕ್ಟರ್ ಅಂದರೆ ೨೫ ಎಕರೆ ಒಳಗೆ ಇರುವ ಬೆಳೆಗಾರರು ಸಣ್ಣ ಬೆಳೆಗಾರರು ಎಂದು ಕಾಫಿ ಮಂಡಳಿ ವ್ಯಾಖ್ಯಾನಿಸುತ್ತದೆ ಎಂದು ಅಧಿಕೃತವಾಗಿ ಪತ್ರ ನೀಡಿದರೂ ಸಹ ಸರ್ಕಾರದಿಂದ ಸಣ್ಣ ಬೆಳೆಗಾರರಿಗೆ ೧೦ ಹೆಚ್.ಪಿ. ವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡುವ ಯೋಜನೆಯನ್ನು ರೈತರಿಗೆ ಒದಗಿಸುವಲ್ಲಿ ಗೊಂದಲವನ್ನು ಎಬ್ಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯ ಎಲ್ಲಾ ಜಾಗಗಳಿಗೆ ಕಂದಾಯ ನಿಗದಿಯನ್ನು ಮಾಡಬೇಕು. ಈಗಾಗಲೇ ಕಂದಾಯ ಸಚಿವ ಅಶೋಕ್ ಅವರು ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದರೂ ಸಹ ಕೊಡಗು ಜಿಲ್ಲೆಯಲ್ಲಿ ಇದು ಅನುಷ್ಠಾನ ಆಗಿಲ್ಲ. ಕಂದಾಯ ಇಲಾಖೆಯ ಕಡತ ವಿಲೇವಾರಿಗೆ ಜನ ಅಲೆಯುವಂತಾಗಿದೆ. ಜಿಲ್ಲೆಯ ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ಭಾರತೀಯ ಕಿಸಾನ್ ಸಂಘ ಕೊಡಗು ಜಿಲ್ಲಾ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷ ಚಿಮ್ಮಂಗಡ ರಾಜ ದೇವಯ್ಯ ,ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಅಳಮೇಂಗಡ ಪಿ. ರಮೇಶ್ ಹಾಜರಿದ್ದರು.