ಸೋಮವಾರಪೇಟೆ, ಡಿ. ೬: ಚಿತ್ರದುರ್ಗದ ಬೃಹನ್ಮಠದಿಂದ ಸೋಮವಾರಪೇಟೆಯ ವಿರಕ್ತ ಮಠವನ್ನು ಕಡೆಗಣಿಸಲಾಗಿದ್ದು, ಹಲವಷ್ಟು ಬಾರಿ ಮಠದ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ವೀರಶೈವ ಸಮಾಜದಿಂದಲೇ ಮಠಕ್ಕೆ ಸ್ವಾಮೀಜಿಯನ್ನು ನೇಮಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕಳೆದ ಹಲವು ವರ್ಷಗಳಿಂದ ಸ್ವಾಮೀಜಿ ಇಲ್ಲದೆ, ಮಠದ ಕಟ್ಟಡ ಜೀರ್ಣಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ, ಈ ಬಗ್ಗೆ ಚರ್ಚಿಸಲು ಸೋಮವಾರಪೇಟೆ ವೀರಶೈವ ಸಮಾಜದ ಯಜಮಾನ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಸೋಮವಾರಪೇಟೆಯ ವಿರಕ್ತ ಮಠವನ್ನು ತಮ್ಮ ಶಾಖಾ ಮಠ ಎಂದುಕೊಳ್ಳುವ ಚಿತ್ರದುರ್ಗ ಮಠವು, ಸೋಮವಾರಪೇಟೆ ಮಠದ ಬಗ್ಗೆ ಯಾವುದೇ ಗಮನ ಹರಿಸದೆ ಸಂಪೂರ್ಣ ನಿರ್ಲಕ್ಷಿಸಿದೆ. ಹಿಂದಿನ ಸ್ವಾಮೀಜಿ ಲಿಂಗೈಕ್ಯರಾಗಿ ಮೂರು ವರ್ಷ ಕಳೆದರೂ ಈವರೆಗೆ ನೂತನ ಸ್ವಾಮೀಜಿಯನ್ನು ನೇಮಿಸಿಲ್ಲ ಎಂದು ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಮಠದಲ್ಲಿ ಜನರಿಲ್ಲದೆ ಕಟ್ಟಡದ ಕೆಲವು ಭಾಗ ಶಿಥಿಲಗೊಂಡು ಬಿದ್ದುಹೋಗುತ್ತಿವೆ. ಆದರೂ ದುರಸ್ತಿಗೊಳಿಸುತ್ತಿಲ್ಲ. ಮಠಕ್ಕೆ ಸೇರಿದ ೩೦ ಎಕರೆ ಜಮೀನು ಪಾಳುಬಿದ್ದಿದೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಗೊಂಡಿತು.

ಸ್ವಾಮೀಜಿ ನೇಮಕಕ್ಕೆ ಸಂಬAಧಿಸಿದAತೆ ಚಿತ್ರದುರ್ಗ ಮಠದ ಈಗಿನ ಉಸ್ತುವಾರಿ ಬಸವಪ್ರಭು ಸ್ವಾಮೀಜಿಯವರ ಗಮನ ಸೆಳೆದು ತಿಂಗಳಾಗುತ್ತಾ ಬಂದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸಮಾಜದ ಮುಖಂಡರು ಆಕ್ಷೇಪಿಸಿದರಲ್ಲದೇ, ಇಂದು ಹಲವು ಮಠಗಳು ಇಲ್ಲದಾಗಿವೆ. ಅಂತಹ ಸಾಲಿಗೆ ಸೋಮವಾರಪೇಟೆ ವಿರಕ್ತ ಮಠ ಸೇರುವುದು ಬೇಡ; ಆದ್ದರಿಂದ ಸಮಾಜದಿಂದಲೇ ಸ್ವಾಮೀಜಿ ನೇಮಕ ಮಾಡಿ, ಆಸ್ತಿಪಾಸ್ತಿಯ ರಕ್ಷಣೆ ಮಾಡಬೇಕು ಎಂದು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಈ ಬಗ್ಗೆ ತಕ್ಷಣಕ್ಕೆ ನೂತನವಾಗಿ ಸಮಿತಿಯನ್ನು ರಚಿಸಲಾಯಿತು. ವಿರಕ್ತ ಮಠಕ್ಕೆ ಸಂಬAಧಿಸಿದAತೆ ಯಾವುದೇ ಕಾರ್ಯಚಟುವಟಿಕೆಗಳು ನಡೆಯಬೇಕಾದರೂ ವೀರಶೈವ ಸಮಾಜ ಹಾಗೂ ಉಸ್ತುವಾರಿ ಸಮಿತಿಯ ಗಮನಕ್ಕೆ ತಂದು ಮುಂದಡಿಯಿಡಬೇಕು ಎಂದು ತೀರ್ಮಾನಿಸಲಾಯಿತು.

ಸಭೆಯಲ್ಲಿ ಮುದ್ದಿಕಟ್ಟೆಮಠದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ವೀರಶೈವ ಸಮಾಜದ ಶೆಟ್ರು ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.