ಪೊನ್ನಂಪೇಟೆ, ಡಿ.೬ : ಗೋಣಿಕೊಪ್ಪಲು ಕಾವೇರಿ ಕಾಲೇಜು ಯುವ ರೆಡ್ ಕ್ರಾಸ್ ಘಟಕ, ಕಾಲೇಜು ಐಕ್ಯೂಎಸಿ ಸೆಲ್ ಹಾಗೂ ಕೊಡಗು ಇನ್ಸಿ÷್ಟಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮತ್ತು ರಕ್ತದಾನ ಶಿಬಿರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಡಿಕೇರಿ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಹಾಗೂ ಮಡಿಕೇರಿ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ.ಕೆ.ಪಿ. ಕರುಂಬಯ್ಯ ರಕ್ತಕ್ಕೆ ಪರ್ಯಾಯವಾಗಿ ಯಾವುದೇ ವಸ್ತು ಇಲ್ಲ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ೧೮ ವರ್ಷಗಳಿಂದ ೬೯ ವರ್ಷದ ಒಳಗಿರುವ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡುವ ಮೂಲಕ ರೋಗಗ್ರಸ್ಥರು ಮತ್ತು ಗಾಯಗೊಂಡವರನ್ನು ಬದುಕಿಸಲು ಸಾಧ್ಯ ಎಂದರು. ಪ್ರಾಂಶುಪಾಲ ಪ್ರೊ.ಎಂ.ಬಿ.ಕಾವೇರಪ್ಪ ಮಾತನಾಡಿ ಯುವ ಜನತೆ ರಕ್ತದಾನ ಮಾಡುವ ಸಂಕಲ್ಪ ಮಾಡಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಕೈ ಜೋಡಿಸಬೇಕು ಎಂದರು.

ಈ ಸಂದರ್ಭ ಉಪಪ್ರಾಂಶುಪಾಲೆ ಡಾ.ಎ.ಎಸ್.ಪೂವಮ್ಮ, ಐಕ್ಯೂಎಸಿ ಸಂಚಾಲಕಿ ಪ್ರೊ. ಎಂ.ಎಸ್. ಭಾರತಿ, ಕಾರ್ಯಕ್ರಮ ಸಂಚಾಲಕ ಹಾಗೂ ಕಾವೇರಿ ಕಾಲೇಜು ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕ ಎಂ.ಎ. ಕುಶಾಲಪ್ಪ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ೬೮ ಮಂದಿ ರಕ್ತದಾನ ಮಾಡಿದರು.