ರಷ್ಯಾದಿಂದ ತೈಲ ಖರೀದಿಸಿದ ಭಾರತ ವಿರುದ್ದ ಉಕ್ರೇನ್ ಸಚಿವ ವಾಗ್ದಾಳಿ

ಕೈವ್, ಡಿ. ೬: ರಷ್ಯಾದಿಂದ ಅಗ್ಗದ ತೈಲ ಖರೀದಿಗಾಗಿ ಪಾಶ್ಚಿಮಾತ್ಯ ಮಾಧ್ಯಮಗಳು ಭಾರತದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿವೆ. ಆದರೆ ಇದೀಗ ಉಕ್ರೇನ್ ಸರ್ಕಾರವು ಮೋದಿ ಸರ್ಕಾರದ ಈ ನಿರ್ಧಾರವನ್ನು ಬಹಿರಂಗವಾಗಿ ಪ್ರಶ್ನಿಸಿದೆ. ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಅವರು ರಷ್ಯಾದಿಂದ ಅಗ್ಗದ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ಇದು ‘ನೈತಿಕವಾಗಿ ಅನ್ಯಾಯ' ಎಂದು ಹೇಳಿದರು. ರಷ್ಯಾದ ಆಕ್ರಮಣದಿಂದಾಗಿ ಉಕ್ರೇನ್ ಜನರು ಪ್ರತಿದಿನ ತೊಂದರೆ ಅನುಭವಿಸುತ್ತಿರುವಾಗ ಭಾರತಕ್ಕೆ ಈ ಅಗ್ಗದ ತೈಲವನ್ನು ಖರೀದಿಸುವ ಅವಕಾಶ ಸಿಕ್ಕಿದೆ ಎಂದು ಕುಲೇಬಾ ಹೇಳಿದರು. ಈ ತಿಂಗಳಲ್ಲಿ ರಷ್ಯಾದಿಂದ ಭಾರತ ಅತೀ ಹೆಚ್ಚು ತೈಲವನ್ನು ಖರೀದಿಸಿದ ಹಿನ್ನೆಲೆಯಲ್ಲಿ ಉಕ್ರೇನ್ ವಿದೇಶಾಂಗ ಸಚಿವ ಈ ಹೇಳಿಕೆ ನೀಡಿದ್ದಾರೆ. ‘ಉಕ್ರೇನ್‌ನ ಜನರು ರಷ್ಯಾದ ದಾಳಿಯಿಂದ ಬಳಲುತ್ತಿದ್ದಾರೆ. ಅಲ್ಲದೆ ಪ್ರತಿದಿನ ನೂರಾರು ಮಂದಿ ಸಾಯುತ್ತಿರುವ ಕಾರಣ ಭಾರತಕ್ಕೆ ರಷ್ಯಾದ ತೈಲವನ್ನು ಅಗ್ಗದ ದರದಲ್ಲಿ ಖರೀದಿಸುವ ಅವಕಾಶ ಬಂದಿದೆ' ಎಂದು ಹೇಳಿದರು. ‘ನಮ್ಮ ಕಷ್ಟದಿಂದ ನೀವು ಪ್ರಯೋಜನ ಪಡೆಯುವುದು ಸರಿಯೇ? ನಿಮ್ಮ ಸಹಾಯ ನಮಗೆ ಹೆಚ್ಚು ಬೇಕು ಎಂದಿರುವ ಅವರು, ಫೆಬ್ರವರಿಯಿಂದ ಯುರೋಪಿಯನ್ ರಾಷ್ಟçಗಳು ರಷ್ಯಾದಿಂದ ಆತೀ ಹೆಚ್ಚು ತೈಲವನ್ನು ಖರೀದಿಸಿವೆ ಎಂಬ ಭಾರತ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಉಕ್ರೇನ್ ವಿರುದ್ಧದ ರಷ್ಯಾ ದಾಳಿಯನ್ನು ಭಾರತ ಖಂಡಿಸಬೇಕು ಎಂದಿದ್ದಾರೆ.

ಮಹಾರಾಷ್ಟç ಲಾರಿಗಳ ಮೇಲೆ ಕಲ್ಲು ತೂರಾಟ

ಬೆಳಗಾವಿ, ಡಿ. ೬: ಮಹಾರಾಷ್ಟç -ಕರ್ನಾಟಕ ಗಡಿ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದು, ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ, ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುಣೆಯಿಂದ ಬೆಂಗಳೂರಿಗೆ ಹೊರಟಿದ್ದ ಮಹಾರಾಷ್ಟç ನೋಂದಣಿ ಹೊಂದಿದ್ದ ವಾಹನಗಳ ಮೇಲೆ ಕರವೇ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದು, ಲಾರಿಗಳ ಗಾಜು ಪುಡಿಪುಡಿಯಾಗಿದೆ. ಅಲ್ಲದೆ ಮಹಾರಾಷ್ಟç ನೋಂದಣಿಯ ಹಲವು ವಾಹನಗಳನ್ನು ತಡೆದು ನಂಬರ್ ಪ್ಲೇಟ್ ಮೇಲೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಮಹಾರಾಷ್ಟç ನಾಯಕರು ನೀಡಿದ್ದ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಂಗಳವಾರ ನಡೆಸಲು ಉದ್ದೇಶಿಸಿರುವ ಬೃಹತ್ ಬಹಿರಂಗ ಸಭೆಯನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ ಕರವೇ ನಾಯಕರ ಬೆಳಗಾವಿ ನಗರ ಪ್ರವೇಶಕ್ಕೂ ತಡೆಯೊಡ್ಡಲಾಗಿದೆ.

ಅಯೋಧ್ಯೆಯಲ್ಲಿ ಆರಂಭಗೊಳ್ಳದ ಹೊಸ ಮಸೀದಿ ನಿರ್ಮಾಣ ಕಾರ್ಯ!

ಅಯೋಧ್ಯಾ, ಡಿ. ೬: ಮುಳ್ಳುತಂತಿಯ ಬೇಲಿ ಮತ್ತು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಹಾಕಿರುವ ಬೋರ್ಡ್ ಅಯೋಧ್ಯೆಯ ಸಮೀಪವಿರುವ ಧನ್ನಿಪುರ ಗ್ರಾಮದ ಈ ಸ್ಥಳದಲ್ಲಿ ದೊಡ್ಡ ಮಸೀದಿ ಸಂಕೀರ್ಣವು ನಿರ್ಮಾಣವಾಗಲಿದೆ ಎಂಬುದಕ್ಕೆ ಏಕೈಕ ಸೂಚಕವಾಗಿದೆ. ಐದು ಎಕರೆ ಜಾಗವನ್ನು ಹಂಚಿಕೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ ಸುಪ್ರೀಂ ಕೋರ್ಟ್ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದವನ್ನು ಇತ್ಯರ್ಥಗೊಳಿಸಿ ಮೂರು ವರ್ಷಗಳು ಕಳೆದರೂ ಉದ್ದೇಶಿತ ಮಸೀದಿ ಸ್ಥಳದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಚಟುವಟಿಕೆಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಟ್ರಸ್ಟ್ನ ಪ್ರಸ್ತಾವನೆಯನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಇನ್ನೂ ಅನುಮೋದಿಸಿಲ್ಲ. ಆದರೆ ಇದಕ್ಕೆ ಶೀಘ್ರದಲ್ಲೇ ಅನುಮೋದನೆ ಸಿಗುತ್ತದೆ ಎಂದು ಟ್ರಸ್ಟ್ ನಿರೀಕ್ಷಿಸುತ್ತಿದೆ. 'ನಾವು ಉದ್ದೇಶಿತ ಸಂಕೀರ್ಣದ ವಿವರವಾದ ನಕ್ಷೆಯನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದೇವೆ. ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ ತೆರವು ಈ ಹಿಂದೆ ವಿಳಂಬವಾಗಿತ್ತು. ನಕ್ಷೆಯ ಕ್ಲಿಯರೆನ್ಸ್ನಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಕಾರ್ಯದರ್ಶಿ ಅಥರ್ ಹುಸೇನ್ ತಿಳಿಸಿದರು. ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ನ ಟ್ರಸ್ಟ್ ಆಗಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಮಸೀದಿಯ ನಿರ್ಮಾಣ ಕಾರ್ಯ ಮಾಡುತ್ತಿದೆ. ೨೦೧೯ರ ಸುಪ್ರೀಂ ಕೋರ್ಟ್ ತೀರ್ಪು ಬಾಬರಿ ಮಸೀದಿ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ಇನ್ನು ಹೊಸ ಮಸೀದಿಗಾಗಿ ಮುಸ್ಲಿಂ ಸಮುದಾಯಕ್ಕೆ ಐದು ಎಕರೆ ಜಾಗವನ್ನು ಮಂಜೂರು ಮಾಡುವಂತೆಯೂ ಕೋರ್ಟ್ ಆದೇಶಿಸಿತ್ತು. ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸಗೊAಡು ಮೂರು ದಶಕಗಳ ನಂತರ, ಅಯೋಧ್ಯೆ ನಗರದ ಜನರು ಎಲ್ಲಾ ಕಹಿಗಳನ್ನು ಮರೆತು, ಭಯ ಮತ್ತು ಅನುಮಾನಗಳ ಬದಲಿಗೆ, ಕಟ್ಟಡದ ಧ್ವಂಸದ ೩೦ನೇ ವಾರ್ಷಿಕೋತ್ಸವದ ಡಿ ೬ರನ್ನು ಸಾಮಾನ್ಯ ದಿನವಾಗಿ ತೆಗೆದುಕೊಳ್ಳುತ್ತಿದ್ದಾರೆ. ಬಾಬರಿ ಮಸೀದಿ ಧ್ವಂಸ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಅಯೋಧ್ಯೆ ಪೊಲೀಸ್ ಕಂಟೋನ್ಮೆAಟ್ ಮತ್ತು ಶಸ್ತ್ರಸಜ್ಜಿತ ಕೋಟೆಯನ್ನು ನಿರ್ಮಿಸಿಲ್ಲ. ಆದರೆ ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆಯಲ್ಲಿ ಬಾಬರಿ ಧ್ವಂಸ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭದ್ರತೆಯನ್ನು ಹೆಚ್ಚಿಸಿತ್ತು.

ಎಲ್ಲರಿಗೂ ಆಹಾರಧಾನ್ಯ ಒದಗಿಸಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ, ಡಿ. ೬: ಯಾರೂ ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಸಂಸ್ಕೃತಿ ಮತ್ತು ಕರ್ತವ್ಯ ಎಂದಿರುವ ಸುಪ್ರೀಂ ಕೋರ್ಟ್, ರಾಷ್ಟಿçÃಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಯಡಿ ಆಹಾರ ಧಾನ್ಯಗಳು ದೇಶದ ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳಬೇಕು ಕೇಂದ್ರ ಸರ್ಕಾರಕ್ಕೆ ಮಂಗಳವಾರ ಸೂಚಿಸಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವಲಸೆ ಕಾರ್ಮಿಕರ ದುರವಸ್ಥೆ ಮತ್ತು ಲಾಕ್ ಡೌನ್ ಪರಿಣಾಮಗಳಿಗೆ ಸಂಬAಧಿಸಿದ ತನ್ನದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂಆರ್ ಶಾ ಮತ್ತು ಹಿಮಾ ಕೊಹ್ಲಿ ಅವರ ಪೀಠ, ಇಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ವಲಸೆ ಮತ್ತು ಅಸಂಘಟಿತ ವಲಯದ ಕಾರ್ಮಿಕರ ಸಂಖ್ಯೆಯೊAದಿಗೆ ಹೊಸ ಚಾರ್ಟ್ ಅನ್ನು ಸಲ್ಲಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದೆ. "ಎನ್‌ಎಫ್‌ಎಸ್‌ಎ ಅಡಿಯಲ್ಲಿ ಆಹಾರ ಧಾನ್ಯಗಳು ಕೊನೆಯ ವ್ಯಕ್ತಿಗೂ ತಲುಪಿರುವುದನ್ನು ಖಚಿತಪಡಿಸಿಕೊಳ್ಳುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ. ಕೇಂದ್ರವು ಏನನ್ನೂ ಮಾಡುತ್ತಿಲ್ಲ ಎಂದು ನಾವು ಹೇಳುತ್ತಿಲ್ಲ. ಕೋವಿಡ್ ಸಮಯದಲ್ಲಿ ಕೇಂದ್ರ ಸರ್ಕಾರ ಜನರಿಗೆ ಆಹಾರ ಧಾನ್ಯಗಳನ್ನು ನೀಡಿದೆ. ಅದು ಮುಂದುವರಿಯಬೇಕು ಎಂದು ನಾವು ಬಯಸುತ್ತೇವೆ. ಯಾರೂ ಖಾಲಿ ಹೊಟ್ಟೆಯಲ್ಲಿ ಮಲಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಸಂಸ್ಕೃತಿ” ಎಂದು ಪೀಠ ಹೇಳಿದೆ.

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ : ಆರೋಪ ದಾಖಲಿಸಿದ ಕೋರ್ಟ್

ಲಖನೌ, ಡಿ. ೬: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಅಕ್ಟೋಬರ್ ೨೦೨೧ ರಲ್ಲಿ ನಾಲ್ವರು ರೈತರ ಮೇಲೆ ಎಸ್ ಯುವಿ ಕಾರು ಚಲಾಯಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲಾ ನ್ಯಾಯಾಲಯ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಮತ್ತು ಇತರ ೧೩ ಜನರ ವಿರುದ್ಧ ಆರೋಪ ದಾಖಲಿಸಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಸುನಿಲ್ ಕುಮಾರ್ ವರ್ಮಾ ಅವರು ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ ೧೬ಕ್ಕೆ ನಿಗದಿಪಡಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್ ೩ ರಂದು, ಆಶಿಶ್ ಮಿಶ್ರಾ ಮಹೀಂದ್ರಾ ಥಾರ್ ಎಸ್‌ಯುವಿಯಲ್ಲಿದ್ದರು ಎಂದು ಹೇಳಲಾಗಿದ್ದು, ಲಖಿಂಪುರ ಖೇರಿಯಲ್ಲಿ ಈಗ ರದ್ದಾಗಿರುವ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ನಾಲ್ವರು ರೈತರು ಮತ್ತು ಪತ್ರಕರ್ತರ ಮೇಲೆ ಕಾರು ಹರಿಸಿದ ಆರೋಪ ಎದುರಿಸುತ್ತಿದ್ದಾರೆ.