ಮಡಿಕೇರಿ, ಡಿ. ೫: ನೆಹರೂ ಯುವ ಕೇಂದ್ರ, ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ ಕೊಡಗು ಮತ್ತು ತಾಲೂಕು ಯುವ ಒಕ್ಕೂಟ, ಭಗತ್ ಯುವಕ ಸಂಘ ಹುಲಿತಾಳ ಮತ್ತು ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜು ಮರಗೋಡು ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಜರುಗಿತು.
ಮರಗೋಡಿನ ಭಾರತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತಿ ಹೈಸ್ಕೂಲ್ ಸೊಸೈಟಿಯ ಅಧ್ಯಕ್ಷ ಕಟ್ಟೆಮನೆ ಸೋನಾಜಿತ್ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿ ದಿಸೆಯಲ್ಲೇ ಸಂವಿಧಾನದ ರಚನೆ ಹಾಗೂ ಧ್ಯೇಯೋದ್ದೇಶಗಳ ಬಗ್ಗೆ ತಿಳಿದುಕೊಂಡರೆ ಭವಿಷ್ಯದಲ್ಲಿ ಸಂವಿಧಾನದ ಸೃಷ್ಟಿಕರ್ತರ ಆಶೋತ್ತರಗಳನ್ನು ನನಸಾಗಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂವಿಧಾನ ದಿನಾಚರಣೆ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ‘ಭಾರತ ಸಂವಿಧಾನದ ಕತೆ’ ವಿಭಾಗದಲ್ಲಿ ಚೇರಂಬಾಣೆ ಅರುಣ ಪ್ರೌಢಶಾಲೆಯ ಶಿಕ್ಷಕ ಎಸ್.ಪಿ. ಪರಮೇಶ್ ಉಪನ್ಯಾಸ ನೀಡಿದರು. ಸ್ವಾತಂತ್ರö್ಯ ಪೂರ್ವದ ಘಟನಾವಳಿಗಳು ಆ ಬಳಿಕ ೧೯೪೬ ರಲ್ಲಿ ಕ್ಯಾಬಿನೆಟ್ ಆಯೋಗದ ಆಗಮನ ಹಾಗೂ ಅದರ ಶಿಫಾರಸ್ಸಿನಂತೆ ಸಂವಿಧಾನ ರಚನಾ ಸಮಿತಿ ಅಸ್ತಿತ್ವಕ್ಕೆ ಬಂದಿತು.ಈ ಸಮಿತಿಯು ದೇಶದಲ್ಲಿ ಅಸ್ತಿತ್ವದಲ್ಲಿದ್ದ ರೆಗ್ಯುಲೇಟಿಂಗ್ ಕಾಯ್ದೆ, ಕೌನ್ಸಿಲ್ಆಕ್ಟ್, ೧೯೩೫ ರ ಕಾಯ್ದೆ ಹೀಗೆ ಹತ್ತು ಹಲವು ವಿಚಾರಗಳ ಪರಾಮರ್ಶೆ ನಡೆಸಿ ಭಾರತದ ಭವ್ಯ ಭವಿಷ್ಯಕ್ಕೆ ಪೂರಕವಾಗುವ ಸಂವಿಧಾನವನ್ನು ರಚಿಸಿತು.೨ ವರ್ಷ ೧೧ ತಿಂಗಳು ಮತ್ತು ೧೮ ದಿನಗಳ ಚರ್ಚೆ-ಮಂಥನಗಳ ಬಳಿಕ ಸಂವಿಧಾನವನ್ನು ೧೯೪೯ ರ ನವೆಂಬರ್ ೨೬ ರಂದು ಅಂಗೀಕರಿಸಲಾಯಿತು.೧೯೫೦ ರ ಜನವರಿ ೨೬ ರಂದು ಸಂವಿಧಾನವು ಜಾರಿಗೆ ಬಂದಿತು. ೪೫೦ ವಿಧಿಗಳಿರುವ ಸಂವಿಧಾನವು ೧೦೪ ತಿದ್ದುಪಡಿಗಳನ್ನು ಕಂಡಿದೆ. ೨೦೧೫ ರ ಅಕ್ಟೋಬರ್ ೧೧ ರಂದು ಮುಂಬೈನಲ್ಲಿ ಅಂಬೇಡ್ಕರ್ ಅವರ ಸಮಾನತೆಯ ಪ್ರತಿಮೆಯನ್ನು ಅನಾವರಣಗೊಳಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನ ದಿನಾಚರಣೆಯನ್ನು ವರ್ಷಂಪ್ರತಿ ಆಚರಿಸುವ ಘೋಷಣೆಯನ್ನು ಮಾಡಿದರು.ನಮ್ಮೆಲ್ಲರ ಮನಸ್ಸಿನಲ್ಲಿ ಭಾರತವನ್ನು ಪೂಜಿಸುವ, ಗೌರವಿಸುವ ಮನೋಭಾವ ಇರಬೇಕು ಎಂದು ತಿಳಿಸಿದರು.
ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂವಿಧಾನದ ಪಿತಾಮಹ ಅಂಬೇಡ್ಕರ್ ಮತ್ತು ಸಂವಿಧಾನ ಕೃತಿಗೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿ ಬಳಿಕ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಮರಗೋಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ ಎಂ ಚಂದ್ರಮೌಳಿ, ಹೊಸ್ಕೇರಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ತೇಜಸ್, ಹೊಸ್ಕೇರಿ ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ಭಾರತಿ ಹೈಸ್ಕೂಲ್ ಸೊಸೈಟಿ ನಿರ್ದೇಶಕಿ ಬಡುವಂಡ್ರ ಕವಿತಾ, ಪ್ರಾಂಶುಪಾಲ ಆರ್. ಸುರೇಶ್ ನಾಯ್ಕ್, ಮುಖ್ಯ ಶಿಕ್ಷಕ ಪಿ.ಎಸ್. ರವಿಕೃಷ್ಣ, ಹಾಕತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಬಿ.ವಿ. ಯೋಗೇಶ್, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್, ಭಗತ್ ಯುವಕ ಸಂಘದ ಕಾರ್ಯದರ್ಶಿ ಹೆಚ್.ಪಿ. ನಂದಕುಮಾರ್ ಉಪಸ್ಥಿತರಿದ್ದರು. ಶಿಕ್ಷಕಿ ಬಿ.ಬಿ. ಪೂರ್ಣಿಮಾ ನಿರ್ವಹಿಸಿದರು.