ಕೂಡಿಗೆ, ಡಿ. ೫ : ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳುವಾರ ಭೈರಪ್ಪನಗುಡಿ ಸಿದ್ಧಲಿಂಗಪುರ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಚಿರತೆಗಳು ಅನೇಕ ಹಸು ಮತ್ತು ಕರುಗಳ ಮೇಲೆ ದಾಳಿ ಮಾಡಿದ್ದು, ೧೦ ಕ್ಕೂ ಹೆಚ್ಚು ಹಸು ಮತ್ತು ಕರುಗಳು ಬಲಿಯಾಗಿವೆ. ಅಲ್ಲದೆ ಸಂಜೆ ೫ ಗಂಟೆ ಸಮಯದಲ್ಲಿ ಅಳುವಾರ, ಅರಕಲ್ಲು, ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷಗೊಳ್ಳುತ್ತಿದೆ ಅಲ್ಲದೆ ಕಾಡಿನಂಚಿನ ಮನೆಯ ಹತ್ತಿರವೇ ಬರುತ್ತಿದ್ದು, ಈ ವ್ಯಾಪ್ತಿಯ ಗ್ರಾಮಸ್ಥರು ಭಯಭೀತರಾಗಿರುತ್ತಾರೆ.
ಕಳೆದ ಒಂದು ವಾರದಿಂದ ಅಳುವಾರ ವ್ಯಾಪ್ತಿಯಲ್ಲಿ ಹಗಲು ವೇಳೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆಗಳಿಂದಾಗಿ ಈ ವ್ಯಾಪ್ತಿಯ ಗ್ರಾಮಗಳ ಅನೇಕ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ರೈತರು ಸಂಜೆ ವೇಳೆ ತಮ್ಮ ಮನೆಗಳಿಗೆ ಸೋಮವಾರಪೇಟೆ ಮುಖ್ಯ ರಸ್ತೆಯಲ್ಲಿ ಬಸ್ ಇಳಿದು ತೆರಳಲು ಭಯಪಡುತ್ತಿದ್ದಾರೆ. ಕಳೆದ ರಾತ್ರಿ ಅಳುವಾರದ ಎಂ.ಎಲ್. ದೇವರಾಜ್ ಎಂಬುವವರ ಮನೆ ಹಿಂಭಾಗದ ಹೊಲದಲ್ಲಿ ಮೇಯಲು ಕಟ್ಟಿಹಾಕಲಾಗಿದ್ದ ಹಸುವನ್ನು ಚಿರತೆ ಕೊಂದು ತಿಂದಿದೆ.
ಬಾಣವಾರ ಮೀಸಲು ಅರಣ್ಯ ಪ್ರದೇಶದ ಸಮೀಪದ ಗ್ರಾಮಗಳಲ್ಲಿ ಎರಡಕ್ಕಿಂತಲೂ ಹೆಚ್ಚು ಚಿರತೆಗಳು ಇದ್ದು, ಈಗಾಗಲೇ ಇವುಗಳಿಂದ ಅನೇಕ ಹಸುಗಳು ಬಲಿಯಾಗಿವೆ. ಅಲ್ಲದೆ ಈ ಗ್ರಾಮಗಳ ಗ್ರಾಮಸ್ಥರು ರೈತರು ತಮ್ಮ ಜಮೀನಿನಲ್ಲಿ ಹಸುಗಳನ್ನು ಕಟ್ಟಿಹಾಕಲು ಭಯಪಡುವಂತಾಗಿದೆ. ಸಂಬAಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಸಂಬAಧ ತುರ್ತಾಗಿ ಕ್ರಮವಾಗಿ ಕೈಗೊಳ್ಳುವಂತೆ ಈ ವ್ಯಾಪ್ತಿಯ ನೂರಾರು ರೈತರು, ಗ್ರಾಮಸ್ಥರು ಒತ್ತಾಯಿಸಿದ್ದಾರೆ.