ನಾಪೋಕ್ಲು, ಡಿ. ೪: ನಾಪೋಕ್ಲು ಶಿವಾಜಿ ಸ್ಪೋಟ್ಸ್ ಕ್ಲಬ್ ವತಿಯಿಂದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಅಂತರರಾಷ್ಟಿçÃಯ ಮಹಿಳಾ ಹಾಕಿ ತೀರ್ಪುಗಾರ್ತಿ ಅನುಪಮಾ ಜ್ಞಾಪಕಾರ್ಥ ಮುಕ್ತ ಹಾಕಿ ಪಂದ್ಯಾಟದ ಫೈನಲ್ ಪಂದ್ಯದಲ್ಲಿ ಬೇಗೂರು ಇವೈಸಿ ತಂಡದ ವಿರುದ್ಧ ನಾಪೋಕ್ಲು ಶಿವಾಜಿ ತಂಡವು ಜಯಗಳಿಸುವುದರ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಬೇಗೂರು ತಂಡವು ರನ್ರ‍್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

ಆಟದ ಆರಂಭದಲ್ಲಿ ಬೇಗೂರು ತಂಡದ ಪರ ಮಾಪಣಮಾಡ ಬೋಪಣ್ಣ ಮೊದಲ ಗೋಲು ದಾಖಲಿಸುವದರ ಮೂಲಕ ತಂಡದ ಮುನ್ನಡೆಗೆ ಕಾರಣರಾದರು. ಆದರೆ, ಅಲ್ಪ ಸಮಯದಲ್ಲಿಯೇ ಶಿವಾಜಿ ತಂಡದ ಪರ ಎಸ್.ಗೇಲ್ ಗೋಲು ದಾಖಲಿಸುವುದರ ಮೂಲಕ ಎರಡು ತಂಡಗಳು ಸಮಬಲ ಸಾಧಿಸಿದವು. ನಂತರ ನಡೆದ ಜಿದ್ದಾಜಿದ್ದಿನಲ್ಲಿ ಎರಡೂ ತಂಡಗಳಿಗೆ ಗೋಲು ದಾಖಲಿಸಲು ಸಾಧ್ಯವಾಗದ ಕಾರಣ ಪೆನಾಲ್ಟಿ ಶೂಟ್‌ಔಟ್ ನೀಡಲಾಯಿತು. ಅದರಲ್ಲೂ ಎರಡು ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಸಡನ್‌ಡೆತ್ ಕ್ರಮವನ್ನು ಅನುಸರಿಸಲಾಯಿತು. ಆ ಸೆಣಸಾಟದಲ್ಲಿ ಶಿವಾಜಿ ತಂಡವು ಬೇಗೂರು ತಂಡವನ್ನು ಮಣಿಸಿ ವಿಜಯಪತಾಕೆ ಹಾರಿಸಿತು.

ತೃತೀಯ ಸ್ಥಾನವನ್ನು ಬೇಂಗ್‌ನಾಡು ಫೋನಿಕ್ಸ್ ತಂಡ ಹಾಗೂ ನಾಲ್ಕನೆಯ ಸ್ಥಾನವನ್ನು ಡಾಲ್ಫಿನ್ಸ್ ತಂಡವು ಪಡೆದುಕೊಂಡಿತು. ಪಂದ್ಯಾಟದಲ್ಲಿ ಒಟ್ಟು ೨೪ ತಂಡಗಳು ಪಾಲ್ಗೊಂಡಿದ್ದವು. ಸಮಾರೋಪ ಸಮಾರಂಭವನ್ನು ಕಾಫಿ ಬೆಳೆಗಾರ ಮಂಡಿರ ಜಯ ದೇವಯ್ಯ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಾಜಿ ಒಲಂಪಿಯನ್, ಹಾಕಿ ಕರ್ನಾಟಕದ ಕಾರ್ಯದರ್ಶಿ ಡಾ. ಎ.ಬಿ.ಸುಬ್ಬಯ್ಯ, ಅನುಪಮಾ ನಿಧನ ದೇಶಕ್ಕೆ ತುಂಬಲಾರದ ನಷ್ಟ. ಅವರ ಸಾಧನೆ ಅಪಾರ. ಅವರ ಗೌರವಾರ್ಥ ಇಂತಹ ಕ್ರೀಡಾಕೂಟಗಳನ್ನು ನಡೆಸುವುದರಿಂದ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿ ನೀಡಿದಂತಾಗುತ್ತದೆ ಎಂದರು.

ಅನುಪಮಾ ಅವರ ಸಹೋದರ ಪುಚ್ಚಿಮಂಡ ಬಬ್ಲೂ ಅಪ್ಪಯ್ಯ ಮಾತನಾಡಿ, ಅನುಪಮಾ ಶ್ರಮಪಟ್ಟು ಸಾಧನೆ ಮಾಡಿ ಉನ್ನತ ಸ್ಥಾನ ತಲುಪಿದರು. ಅವರ ಸಾಧನೆಯನ್ನು ಸಾರ್ವಜನಿಕವಾಗಿ ತಿಳಿಸುವ ಕಾರ್ಯವನ್ನು ಶಿವಾಜಿ ಸ್ಪೋರ್ಟ್ಸ್ ಕ್ಲಬ್ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಸ್ಥಳೀಯ ಕಾಫಿ ಬೆಳೆಗಾರರಾದ ಬಿದ್ದಾಟಂಡ ಪಾಪಾ ಮುದ್ದಯ್ಯ, ಭಾರತ ಥ್ರೋಬಾಲ್ ತಂಡದ ಮಾಜಿ ನಾಯಕಿ ಬೊಪ್ಪಂಡ ರೀಮಾ ಅಪ್ಪಚ್ಚು, ಪುಚ್ಚಿಮಂಡ ಕಾವೇರಿ,

(ಮೊದಲ ಪುಟದಿಂದ) ಮತ್ತಿತರರು ಇದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾಜಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಕೇಲೇಟಿರ ದೀಪು ದೇವಯ್ಯ ವಹಿಸಿದ್ದರು. ಕೇಲೇಟಿರ ದೇಚಮ್ಮ ಪ್ರಾರ್ಥಿಸಿ, ಕುಲ್ಲೇಟಿರ ಅರುಣ್ ಬೇಬ ಸ್ವಾಗತಿಸಿ, ಶ್ರೀರಕ್ಷಾ ಪ್ರಭಾಕರ್ ನಿರೂಪಿಸಿ, ವಂದಿಸಿದರು.

ವೈಯಕ್ತಿಕ ಪ್ರಶಸ್ತಿ: ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಡಾಲ್ಫಿನ್ಸ್ ತಂಡದ ಚೇತನ್, ಬೆಸ್ಟ್ ಫಾರ್ವರ್ಡ್ ಪ್ರಶಸ್ತಿಯನ್ನು ಬೇಗೂರು ತಂಡದ ಮಂಜುನಾಥ್, ಬೆಸ್ಟ್ ಹಾಫ್ ಬ್ಯಾಕ್ ಪ್ರಶಸ್ತಿಯನ್ನು ಶಿವಾಜಿ ತಂಡದ ಕೂತಂಡ ಸಜನ್, ಬೆಸ್ಟ್ ಫುಲ್ ಬ್ಯಾಕ್ ಪ್ರಶಸ್ತಿಯನ್ನು ಬೇಂಗ್‌ನಾಡು ತಂಡದ ಪಟ್ಟಡ ಬೆಳ್ಯಪ್ಪ, ಅತಿಹೆಚ್ಚು ಗೋಲ್ ಬಾರಿಸಿದ ಆಟಗಾರ ಪ್ರಶಸ್ತಿಯನ್ನು ಬೇಂಗ್‌ನಾಡು ತಂಡದ ಪಳಂಗAಡ ಕಾಳಪ್ಪ ಶ್ಯಾಮ್, ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಶಿವಾಜಿ ತಂಡದ ಮುಕ್ಕಾಟಿರ ಪೂಣಚ್ಚ ಪಡೆದುಕೊಂಡರು.

ಪAದ್ಯಾಟದ ನಿರ್ದೇಶಕರಾಗಿ ನಾಯಕಂಡ ದೀಪು ಚಂಗಪ್ಪ, ತೀರ್ಪುಗಾರರಾಗಿ ನೆಲ್ಲಮಕ್ಕಡ ಪವನ್, ಕೋಡಿಮಣಿಯಂಡ ಗಣಪತಿ, ಚೆಯ್ಯಂಡ ಅಪ್ಪಚ್ಚು, ಚಂದಪAಡ ಆಕಾಶ್, ಬೊಳ್ಳಚಂಡ ನಾಣಯ್ಯ, ಕೊಂಡಿರ ಕೀರ್ತಿ, ಚೋಯಮಾಡಂಡ ಚಂಗಪ್ಪ, ಕರವಂಡ ಅಪ್ಪಣ್ಣ, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಕುಪ್ಪಂಡ ದಿಲನ್, ಅಂಜಪರವAಡ ಕುಶಾಲಪ್ಪ, ವಿನೋದ್ ಕಾರ್ಯ ನಿರ್ವಹಿಸಿದರು.

ಪಂದ್ಯಾಟದ ವೀಕ್ಷಕ ವಿವರಣೆಯನ್ನು ಕುಲ್ಲೇಟಿರ ಅರುಣ್ ಬೇಬ, ಅಜ್ಜೆಟ್ಟಿರ ವಿಕ್ರಮ್ ಉತ್ತಪ್ಪ, ಕರವಂಡ ಅಪ್ಪಣ್ಣ ನೀಡಿದರು.ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಹಾಕಿ ಕ್ರೀಡಾಕೂಟದಲ್ಲಿ ಜಿಲ್ಲೆಯ ತಂಡದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಪಡೆಯಲು ಕಾರಣರಾದ ತಿರೋಡಿರ ನಿರೂಪ್ ಹಾಗೂ ಕೇಲೇಟಿರ ಮುತ್ತಣ್ಣ ಅವರಿಗೆ ಡಾ. ಎ.ಬಿ.ಸುಬ್ಬಯ್ಯ ಹಾಕಿ ಸ್ಟಿಕ್ ನೀಡಿದರು. -ಪಿ.ವಿ.ಪ್ರಭಾಕರ್